ಹುಲಿ ದಾಳಿಗೆ ಗ್ರಾಮಸ್ಥ ಬಲಿ: ಅರಣ್ಯ ಅಧಿಕಾರಿಗಳ ಮೇಲೆ ಸ್ಥಳೀಯರಿಂದ ಹಲ್ಲೆ

Update: 2023-06-29 02:58 GMT

ಫೋಟೋ: PTI

ಭಂದಾರಾ: ಗಂಟೆಯ ಹಿಂದೆ ಗ್ರಾಮಸ್ಥನೊಬ್ಬನನ್ನು ಕೊಂದ ಹುಲಿ ಹಿಡಿಯಲು ಆಗಮಿಸಿದ ಅರಣ್ಯ ಅಧಿಕಾರಿಗಳ ತಂಡದ ಮೇಲೆ ಸ್ಥಳೀಯರು ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದ ಭಂದಾರಾ ಜಿಲ್ಲೆಯಿಂದ ವರದಿಯಾಗಿದೆ. ಘಟನೆಯಲ್ಲಿ ಒಬ್ಬರು ಅರಣ್ಯಾಧಿಕಾರಿ ಹಾಗೂ ಇಬ್ಬರು ಅರಣ್ಯ ರಕ್ಷಕರು ಗಾಯಗೊಂಡಿದ್ದಾರೆ.

ಭಂದಾರಾ ಜಿಲ್ಲೆಯ ಪೋನಿ ತಾಲೂಕಿನ ಖತಖೇಡಾ ಎಂಬ ಗ್ರಾಮದಲ್ಲಿ ಈಶ್ವರ್ ಮೋಟಘಾರೆ ಎಂಬ 52 ವರ್ಷದ ವ್ಯಕ್ತಿಯ ಮೇಲೆ ಹುಲಿ ದಾಳಿ ಮಾಡಿ ಅವರನ್ನು ಕೊಂದು ಹಾಕಿತ್ತು. ಈ ಹುಲಿಯನ್ನು ಹಿಡಿಯಲು ಆಗಮಿಸಿದ ಅರಣ್ಯ ಅಧಿಕಾರಿಗಳ ಮೇಲೆ ಉದ್ರಿಕ್ತ ಗ್ರಾಮಸ್ಥರ ಗುಂಪು ದಾಳಿ ನಡೆಸಿದ್ದು, ಸಹಾಯಕ ಅರಣ್ಯ ಸಂರಕ್ಷಕ (ಎಸಿಎಫ್) ಹಾಗೂ ಇಬ್ಬರು ಅರಣ್ಯ ರಕ್ಷಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೂವರೂ ನಾಗ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳಿಕ ಹುಲಿಗೆ ಮಂಪರು ಬರಿಸುವ ಔಷಧ ನೀಡಿ ಅದನ್ನು ಗೋರೆವಾಡ ಪರಿಹಾರ ಕೇಂದ್ರಕ್ಕೆ ಒಯ್ಯಲಾಗಿದೆ.

ಮೃತ ವ್ಯಕ್ತಿಯ ಕುಟುಂಬಕ್ಕೆ ಉಪ ಅರಣ್ಯ ಸಂರಕ್ಷಕರು 30 ಸಾವಿರ ಹಾಗೂ 9.70 ಲಕ್ಷ ರೂಪಾಯಿಯ ಎರಡು ಚೆಕ್ಗಳಲ್ಲಿ ಪರಿಹಾರ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News