ಹೊಸ ವಿಮಾನಯಾನ ಸಂಸ್ಥೆ ಆರಂಭಿಸಲು ಹಳೆಯ ವಿಮಾನಗಳನ್ನು ಖರೀದಿಸುತ್ತಿರುವ ಯುವ ಉದ್ಯಮಿ !

Update: 2023-07-20 13:32 GMT

ಲಂಡನ್: ಬ್ರಿಟನ್‌ನ ಯುವ ಉದ್ಯಮಿ ಜೇಮ್ಸ್‌ ಅಸ್ಖಿತ್‌ ಅವರು ಗಾಟ್ವಿಕ್‌ನಲ್ಲಿ ಹೊಸ ವಿಮಾನಯಾನ ಸಂಸ್ಥೆ ಆರಂಭಿಸಲು ಮುಂದಾಗಿದ್ದಾರೆ. ಡಬಲ್‌ ಡೆಕ್ಕರ್‌ ಎ380 ವಿಮಾನಕ್ಕೆ ಹೆಚ್ಚು ಬೇಡಿಕೆಯಿಲ್ಲದೇ ಇರುವುದನ್ನು ಗಮನಿಸಿರುವ ಜೇಮ್ಸ್‌ ಈ ವಿಮಾನಗಳ 'ಸೆಕೆಂಡ್‌ ಹ್ಯಾಂಡ್‌' ಖರೀದಿಯನ್ನು ಕಡಿಮೆ ಬೆಲೆಗೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಜಗತ್ತಿನ ಅತ್ಯಂತ ದೊಡ್ಡ ಪ್ರಯಾಣಿಕ ವಿಮಾನವಾಗಿರುವ ಹೊರತಾಗಿಯೂ ಇದಕ್ಕೆ ಸಾಕಷ್ಟು ಬೇಡಿಕೆಯಿಲ್ಲದೇ ಇರುವುದರಿಂದ ಅದರ ತಯಾರಿ 2021ರಲ್ಲಿಯೇ ಸ್ಥಗಿತಗೊಳಿಸಲಾಗಿತ್ತು. ಹಲವು ವಿಮಾನಯಾನ ಸಂಸ್ಥೆಗಳು ಈ ವಿಮಾನವನ್ನು ಬದಿಗಿರಿಸಿ ಅಗ್ಗದ ದರದ ವಿಮಾನಗಳಿಗೆ ಮೊರೆ ಹೋಗಿವೆ.

ಈ ಬೇಡಿಕೆಯಿಲ್ಲದ ವಿಮಾನಗಳನ್ನು ಖರೀದಿಸಿ ಜೇಮ್ಸ್‌ ಅವರು ಗ್ಲೋಬಲ್‌ ಏರ್‌ಲೈನ್ಸ್‌ ಸ್ಥಾಪಿಸಲಿದ್ದು ವಿಮಾನ ಪ್ರಯಾಣಿಕರಿಗೆ ಈ ವಿಶಾಲ ವಿಮಾನ ಇಷ್ಟವಾಗಲಿದೆ ಎಂಬ ಆಶಾವಾದ ಹೊಂದಿದ್ದಾರೆ. ಜೇಮ್ಸ್‌ ಅವರಿಗೆ 10 ಲಕ್ಷಕ್ಕೂ ಅಧಿಕ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಇದ್ದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಭೇಟಿ ನೀಡಿರುವ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.

ಹೆಚ್ಚಿನ ಸಂಸ್ಥೆಗಳು ವಿಮಾನಗಳನ್ನು ಲೀಸ್‌ಗೆ ಪಡೆಯುವ ಪರಿಪಾಠ ಹೊಂದಿದ್ದರೆ ಜೇಮ್ಸ್‌ ಈ ವಿಮಾನಗಳನ್ನು ಖರೀದಿಸುತ್ತಿದ್ದಾರೆ ಹಾಗೂ ಇದು ಮುಂದೆ ಲಾಭದಾಯಕವಾಗಲಿದೆ ಹಾಗೂ ಪ್ರಯಾಣಿಕರಿಗೆ ಈ ವಿಮಾನಗಳು ಇಷ್ಟವಾಗಲಿದೆ ಎಂದು ಹೇಳುತ್ತಾರೆ.

ಮುಂದಿನ ವರ್ಷ ತಾವು ಖರೀದಿಸಿದ ವಿಮಾನಗಳು ಗಾಟ್ವಿಕ್‌ನಿಂದ ನ್ಯೂಯಾರ್ಕ್‌ಗೆ ಹಾರಾಟ ನಡೆಸಲಿದೆ ಎಂದೂ ಅವರು ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News