ತೈವಾನ್ ಸುತ್ತ ಚೀನಾದ ಮಿಲಿಟರಿ ಕವಾಯತು ಆರಂಭ
ಬೀಜಿಂಗ್ : ತೈವಾನ್ ಅನ್ನು ಸುತ್ತುವರಿಯಲು ಯುದ್ಧವಿಮಾನ ಮತ್ತು ಸಮರನೌಕೆಯನ್ನು ಚೀನಾ ಸೋಮವಾರ ನಿಯೋಜಿಸಿದ್ದು `ಜಂಟಿ ಖಡ್ಗ' ಎಂಬ ಹೆಸರಿನ ಈ ಮಿಲಿಟರಿ ಕವಾಯತು ಸ್ವಯಂ ಆಡಳಿತದ ದ್ವೀಪದಲ್ಲಿರುವ ಪ್ರತ್ಯೇಕತಾವಾದಿ ಪಡೆಗಳಿಗೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.
ತೈವಾನ್ ತನ್ನ ಭೂಪ್ರದೇಶದ ವ್ಯಾಪ್ತಿಯಲ್ಲಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ, ತೈವಾನ್ ಮೇಲೆ ನಿಯಂತ್ರಣ ಸಾಧಿಸಲು ಅಗತ್ಯಬಿದ್ದರೆ ಬಲ ಪ್ರಯೋಗಿಸಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಿದೆ. ಅಕ್ಟೋಬರ್ 10ರಂದು ತೈವಾನ್‍ನ ರಾಷ್ಟ್ರೀಯ ದಿನಾಚರಣೆ ಸಂದರ್ಭದ ಭಾಷಣದಲ್ಲಿ ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ` ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು ತೈವಾನ್ ಅನ್ನು ಪ್ರತಿನಿಧಿಸುವ ಯಾವುದೇ ಹಕ್ಕನ್ನು ಹೊಂದಿಲ್ಲ. ತೈವಾನ್ ಮತ್ತು ಚೀನಾ ಪರಸ್ಪರ ಅಧೀನವಾಗಿಲ್ಲ. ತೈವಾನ್‍ನ ಸಾರ್ವಭೌಮತ್ವವನ್ನು ರಕ್ಷಿಸಲು ತಮ್ಮ ಸರಕಾರ ಆದ್ಯತೆ ನೀಡುವುದಾಗಿ ಹೇಳಿದ್ದರು.
ಲಾಯ್ ಅವರ ಪ್ರಚೋದನೆಗಳು ತೈವಾನ್ ಜನರ ವಿಪತ್ತಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದ ಚೀನಾವು ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಬಾರಿ ತೈವಾನ್ ಸುತ್ತಮುತ್ತ ಸಮರಾಭ್ಯಾಸಕ್ಕೆ ಚಾಲನೆ ನೀಡಿದೆ.
ಚೀನಾದ ಮಿಲಿಟರಿ ಕವಾಯತು `ತರ್ಕಬದ್ಧವಲ್ಲದ ಪ್ರಚೋದನಕಾರಿ ನಡೆ' ಎಂದು ತೈವಾನ್ ಖಂಡಿಸಿದ್ದು ಪ್ರತಿಯಾಗಿ ಸೂಕ್ತ ಪಡೆಗಳನ್ನು ಸಜ್ಜುಗೊಳಿಸಿರುವುದಾಗಿ ಹೇಳಿದೆ. `ಜಂಟಿ ಖಡ್ಗ-2024ಬಿ' ಎಂದು ಹೆಸರಿಸಲಾದ ಈ ಕವಾಯತು `ಮಿಲಿಟರಿಯ ಪೂರ್ವ ಥಿಯೇಟರ್ ಕಮಾಂಡ್(ಸಶಸ್ತ್ರಪಡೆಯ ಮೂರೂ ವಿಭಾಗಗಳ ನಡುವೆ ಉತ್ತಮ ಸಮನ್ವಯ ಸಾಧಿಸುವ ಸೇನಾ ವಿಭಾಗ)ನ ಜಂಟಿ ಕಾರ್ಯಾಚರಣೆ ಸಾಮಥ್ರ್ಯಗಳನ್ನು ಪರೀಕ್ಷಿಸುತ್ತದೆ. ತೈವಾನ್ ದ್ವೀಪದ ಉತ್ತರ, ದಕ್ಷಿಣ ಮತ್ತು ಪೂರ್ವದ ಪ್ರದೇಶದಲ್ಲಿ ಸಮರಾಭ್ಯಾಸ ನಡೆಯುತ್ತಿದೆ' ಎಂದು ಈಸ್ಟರ್ನ್ ಥಿಯೇಟರ್ ಕಮಾಂಡ್‍ನ ವಕ್ತಾರ ಕ್ಯಾ. ಲಿ ಕ್ಸಿ ಹೇಳಿದ್ದಾರೆ.
ಈ ಕವಾಯತು ಸಮುದ್ರ-ವಾಯು ಯುದ್ಧ ಸಿದ್ಧತೆ ಗಸ್ತು, ಪ್ರಮುಖ ಬಂದರುಗಳು ಮತ್ತು ಪ್ರದೇಶಗಳಲ್ಲಿ ದಿಗ್ಬಂಧನ ವಿಷಯಗಳ ಮೇಲೆ ಕೇಂದ್ರೀಕೃತಗೊಂಡಿದೆ. ಕಡಲು ಮತ್ತು ನೆಲದ ಗುರಿಗಳ ಮೇಲೆ ಆಕ್ರಮಣ ಹಾಗೂ ಸಮಗ್ರ ಶ್ರೇಣಿಯ ಜಂಟಿ ವಶಪಡಿಸಿಕೊಳ್ಳುವಿಕೆ ಕಾರ್ಯಾಚರಣೆಯನ್ನೂ ನಡೆಸಲಾಗುತ್ತಿದೆ. ತೈವಾನ್ ದ್ವೀಪದ ಸುತ್ತಲೂ ತಪಾಸಣೆ ನಡೆಸಲು ಚೀನಾದ ಕರಾವಳಿ ಕಾವಲು ಪಡೆಯನ್ನೂ ರವಾನಿಸಲಾಗಿದೆ ಎಂದವರು ಹೇಳಿದ್ದಾರೆ. ಕರಾವಳಿ ಕಾವಲು ಪಡೆ ಬಿಡುಗಡೆ ಮಾಡಿದ ರೇಖಾಚಿತ್ರವು ನಾಲ್ಕು ಸಮರನೌಕೆಗಳು ತೈವಾನ್ ಅನ್ನು ಸುತ್ತುವರಿದಿರುವುದು ಮತ್ತು ದ್ವೀಪದ ಸುತ್ತಲೂ ಅಪ್ರದಕ್ಷಿಣಾಕಾರವಾಗಿ ಚಲಿಸುತ್ತಿರುವುದನ್ನು ತೋರಿಸಿದೆ. ಮಿಲಿಟರಿ ಕವಾಯತು ದೇಶದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಏಕತೆಯನ್ನು ಕಾಪಾಡಲು ಕಾನೂನುಬದ್ಧ ಮತ್ತು ಅಗತ್ಯ ಕಾರ್ಯಾಚರಣೆಯಾಗಿದೆ' ಎಂದು ಚೀನಾದ ವಿದೇಶಾಂಗ ಇಲಾಖೆ ಸೋಮವಾರ ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ತೈವಾನ್ ಸುತ್ತಮುತ್ತ ಮಿಲಿಟರಿ ಚಟುವಟಿಕೆಯನ್ನು ಚೀನಾ ಹೆಚ್ಚಿಸಿದ್ದು ಯುದ್ಧ ವಿಮಾನಗಳನ್ನು ರವಾನಿಸುವ ಜತೆಗೆ, ತೈವಾನ್ ಸುತ್ತಲಿನ ಜಲಪ್ರದೇಶದಲ್ಲಿ ತನ್ನ ಸಮರನೌಕೆಯನ್ನು ನಿರಂತರ ನಿಯೋಜಿಸುತ್ತಿದೆ. ಪ್ರಚೋದನೆ ಹೆಚ್ಚಿದರೆ ನಿಯಂತ್ರಣ ಬಿಗಿಯಾಗುತ್ತದೆ' ಎಂದು ಚೀನಾದ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ `ಸಿಸಿಟಿವಿ' ಬಿಡುಗಡೆಗೊಳಿಸಿರುವ ವೀಡಿಯೊದಲ್ಲಿ ಎಚ್ಚರಿಕೆ ನೀಡಲಾಗಿದೆ.
► 1949ರ ಅಂತರ್ಯುದ್ಧ
ಚೀನಾ-ತೈವಾನ್ ನಡುವಿನ ವಿವಾದ 1949ರ ಅಂತರ್ಯುದ್ಧದ ಸಮಯದಿಂದಲೂ ಮುಂದುವರಿದಿದೆ. ಯುದ್ಧದಲ್ಲಿ ಚಿಯಾಂಗ್ ಕೈ-ಶೆಕ್ ಅವರ ನ್ಯಾಷನಲಿಸ್ಟ್ ಪಡೆಗಳನ್ನು ಮಾವೊ ಝೆದಾಂಗ್‍ರ ಕಮ್ಯುನಿಸ್ಟ್ ಹೋರಾಟಗಾರರ ಪಡೆ ಸೋಲಿಸಿದ್ದರಿಂದ ನ್ಯಾಷನಲಿಸ್ಟ್ ಪಡೆ ತೈವಾನ್ ದ್ವೀಪಕ್ಕೆ ಪಲಾಯನ ಮಾಡಿ ಅಲ್ಲಿ ಸರಕಾರ ಸ್ಥಾಪಿಸಿ ಆಡಳಿತ ಆರಂಭಿಸಿತು. ಈಗಿನ ಅಧ್ಯಕ್ಷ ಲಾಯ್ ಅವರ ಡೆಮೊಕ್ರಟಿಕ್ ಪ್ರೋಗ್ರೆಸಿವ್ ಪಕ್ಷವು ತನ್ನದೇ ಆದ ಮಿಲಿಟರಿ, ಕರೆನ್ಸಿ ಮತ್ತು ಸರಕಾರವನ್ನು ಹೊಂದಿರುವ ತೈವಾನ್‍ನ ಸಾರ್ವಭೌಮತೆ ಮತ್ತು ಪ್ರಜಾಪ್ರಭುತ್ವವನ್ನು ದೀರ್ಘಾವಧಿಯಿಂದ ಸಮರ್ಥಿಸುತ್ತಿದೆ.
ತೈವಾನ್ ಅನ್ನು ಜಾಗತಿಕ ವೇದಿಕೆಯಿಂದ ಅಳಿಸಿ ಹಾಕಲು ಬಯಸಿರುವ ಚೀನಾವು ಜಾಗತಿಕ ವೇದಿಕೆಗಳಿಂದ ಅದನ್ನು ನಿರ್ಬಂಧಿಸುತ್ತಿದೆ ಮತ್ತು ಅದರ ರಾಜತಾಂತ್ರಿಕ ಮಿತ್ರರ ವಿರುದ್ಧ ಒತ್ತಡ ತಂತ್ರ ಹೇರುತ್ತಿದೆ.
► ಚೀನಾಕ್ಕೆ ಅಮೆರಿಕ ಎಚ್ಚರಿಕೆ
ತೈವಾನ್ ಮೇಲೆ ಯಾವುದೇ ಪ್ರಚೋದನಕಾರಿ ಕ್ರಮಗಳನ್ನು ಕೈಗೊಳ್ಳದಂತೆ ಅಮೆರಿಕವು ಚೀನಾಕ್ಕೆ ಎಚ್ಚರಿಕೆ ನೀಡಿದೆ.
ತೈವಾನ್ ಬಳಿ ನಡೆಯುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ದಕ್ಷಿಣ ಮತ್ತು ಪೂರ್ವ ಸಮುದ್ರಗಳಲ್ಲಿ ಹಡಗುಗಳ ಸಂಚಾರಕ್ಕೆ ಮತ್ತು ಆಗಸದಲ್ಲಿ ವಿಮಾನಗಳಿಗೆ ಮುಕ್ತ ಅವಕಾಶವನ್ನು ಹಾಗೂ ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಉಳಿಸಿಕೊಳ್ಳುವ ಪ್ರಾಮುಖ್ಯತೆಯನ್ನು ನಾವು ಎತ್ತಿಹಿಡಿಯುತ್ತೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥೊನಿ ಬ್ಲಿಂಕೆನ್ ಹೇಳಿದ್ದಾರೆ.