ಜಾಗತಿಕ ಹಸಿವು ಸೂಚ್ಯಂಕ | ಭಾರತಕ್ಕೆ 105ನೇ ರ‍್ಯಾಂಕ್‌

Update: 2024-10-12 18:01 GMT

Photo: Overseas Development Institute

ಹೊಸದಿಲ್ಲಿ : ಜಾಗತಿಕ ಹಸಿವು ಸೂಚ್ಯಂಕವನ್ನು ಶನಿವಾರ ಬಿಡುಗಡೆಗೊಳಿಸಲಾಗಿದ್ದು, 127 ರಾಷ್ಟ್ರಗಳ ಪೈಕಿ ಭಾರವು 105ನೇ ಸ್ಥಾನದಲ್ಲಿದೆ. ಹಸಿವು ಸಮಸ್ಯೆ ಗಂಭೀರವಾಗಿರುವುದಾಗಿ ಪರಿಗಣಿಸಲಾದ 42 ರಾಷ್ಟ್ರಗಳಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದೊಂದಿಗೆ ಭಾರತವೂ ಕೂಡಾ ಸ್ಥಾನಪಡೆದಿದೆ.

2024ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 27.3 ಅಂಕಗಳನ್ನು ಹೊಂದಿದ್ದು, ಭಾರತದಲ್ಲಿ ಹಸಿವಿನ ಮಟ್ಟವು ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.

ದೇಶದಲ್ಲಿ 5 ವರ್ಷಕ್ಕಿಂತ ಕೆಳಗಿನ ಪ್ರಾಯದ ಶೇ.35.5ಕ್ಕೂ ಅಧಿಕ ಮಕ್ಕಳು, ಕುಂಠಿತ ದೇಹ ಬೆಳವಣಿಗೆಯುಳ್ಳವರಾಗಿದ್ದಾರೆ ಹಾಗೂ ಐದು ವರ್ಷಕ್ಕಿಂತ ಕೆಳಗಿನ ಪ್ರಾಯದ ಸುಮಾರು ಶೇ.18.7 ಮಕ್ಕಳು ಕೃಶಕಾಯರಾಗಿದ್ದಾರೆ. ದೇಶದ ಜನಸಂಖ್ಯೆಯ ಶೇ.13.7ರಷ್ಟು ಮಂದಿ ಪೌಷ್ಟಿಕತೆಯ ಕೊರತೆಯನ್ನು ಹೊಂದಿದ್ದಾರೆಂದು ವರದಿ ಹೇಳಿದೆ.

ಇದಕ್ಕೆ ವ್ಯತಿರಿಕ್ತವಾಗಿ ದಕ್ಷಿಣ ಏಶ್ಯದ ರಾಷ್ಟ್ರಗಳಾದ ಬಾಂಗ್ಲಾ, ನೇಪಾಳ ಹಾಗೂ ಶ್ರೀಲಂಕಾ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದು, ‘‘ಸಾಧಾರಣ’’ಶ್ರೇಣಿಯಲ್ಲಿ ಸ್ಥಾನಪಡೆದುಕೊಂಡಿವೆ.

ಕಳೆದ ವರ್ಷ ಭಾರತವು ಜಾಗತಿಕ ಹಸಿವು ಸೂಚ್ಯಂಕದಲ್ಲಿ 125 ರಾಷ್ಟ್ರಗಳ ಪೈಕಿ 111ನೇ ಸ್ಥಾನದಲ್ಲಿತ್ತು. ಶಿಶು ಮರಣ ಪ್ರಮಾಣದಲ್ಲಿ ತುಸು ಇಳಿಕೆಯಾಗಿರುವುದು ಹಾಗೂ ಪೌಷ್ಟಿಕತೆಯ ಕೊರತೆಯುಳ್ಳವರ ಪ್ರಮಾಣ ಕುಸಿದಿರುವುದು, ಸೂಚ್ಯಂಕದಲ್ಲಿ ಭಾರತದ ರ‍್ಯಾಂಕಿಂಗ್‌ನಲ್ಲಿ ತುಸು ಸುಧಾರಣೆಯಾಗಲು ಕಾರಣವಾಗಿದೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದಲ್ಲಿ ಏರಿಕೆಯಾದರೂ, ಹಸಿವಿನ ಪ್ರಮಾಣವು ಇಳಿಕೆಯಾಗುವುದನ್ನು ಖಾತರಿಪಡಿಸಲು ಸಾಧ್ಯವಾಗದು ಎಂದು ವರದಿ ಅಭಿಪ್ರಾಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News