ಮಧ್ಯಪ್ರದೇಶ | 9 ವರ್ಷದ ಬಾಲಕಿ ತಮಾಷೆ ಮಾಡಿದ್ದಕ್ಕೆ ಬಾವಿಗೆ ತಳ್ಳಿ ಕಲ್ಲೆಸೆದು ಕೊಲೆ!

Update: 2024-10-12 17:24 GMT

ಭೋಪಾಲ್ : ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ 9 ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ, ಕಲ್ಲೆಸೆದು ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಕುಳಿಯ ಗ್ರಾಮದಲ್ಲಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಮೋಹಿನಿ ಶ್ರೀವಾಸ್ ಎಂಬ ಬಾಲಕಿ ತನ್ನ ಅಣ್ಣನೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಕೋರ ಬಾಲಕಿಯ ಸಹೋದರನ ಮೇಲೂ ಕಲ್ಲು ತೂರಾಟ ನಡೆಸಿದ್ದು, ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಹಿಂದೆ ಬಾಲಕಿ ತಮಾಷೆ ಮಾಡಿದ್ದಕ್ಕೆ ವ್ಯಕ್ತಿ ಕೋಪಗೊಂಡಿದ್ದ ಎಂದು ತಿಳಿದು ಬಂದಿದೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೋಹಿನಿಯ ಮೃತದೇಹವನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಶುಕ್ರವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.

ಮೃತ ಮೋಹಿನಿ ಶ್ರೀವಾಸ್ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆ ತನ್ನ ಅಜ್ಜಿ ಮತ್ತು ಚಿಕ್ಕಪ್ಪನೊಂದಿಗೆ ದೇವ್ಕುಲಿಯಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆಕೆಯ ಪೋಷಕರು ದಿಲ್ಲಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆರೋಪಿ ಗೋವರ್ಧನ್ ಪಟೇಲ್ ಕೂಡ ಅದೇ ಗ್ರಾಮದ ನಿವಾಸಿ ಎನ್ನಲಾಗಿದೆ.

ವಿಚಾರಣೆ ವೇಳೆ ಗೋವರ್ಧನ್ ಪಟೇಲ್ ತಪ್ಪೊಪ್ಪಿಕೊಂಡಿದ್ದು, ಬಾಲಕಿ ತನ್ನನ್ನು ತಮಾಷೆ ಮಾಡಿದ್ದು ಕೋಪಕ್ಕೆ ಕಾರಣವಾಗಿತ್ತು ಎಂದು ಹೇಳಿದ್ದಾನೆ. ಮೋಹಿನಿಯ ಸಹೋದರ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಆತನನ್ನೂ ಕೊಲ್ಲುತ್ತಿದ್ದೆ ಎಂದು ಆರೋಪಿ ಹೇಳಿದ್ದಾನೆ. ಆತನಿಂದ ಬಾಲಕಿಯ ಕಾಲುಂಗುರವನ್ನು ವಶಪಡಿಸಿಕೊಳ್ಳಲಾಗಿದೆ. .

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News