“ಶೇಮ್ ಶೇಮ್”: ಇಸ್ರೇಲ್-ಹಮಾಸ್ ನಿಲುವಿಗಾಗಿ ಕೆನಡಾದ ಮಸೀದಿಯಲ್ಲಿ ಮುಜುಗರಕ್ಕೊಳಗಾದ ಪ್ರಧಾನಿ ಟ್ರುಡೊ
ಟೊರೊಂಟೊ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಟೊರೊಂಟೊದಲ್ಲಿಯ ಮಸೀದಿಗೆ ಭೇಟಿ ನೀಡಿದಾಗ ಇಸ್ರೇಲ್-ಹಮಾಸ್ ಯುದ್ಧದ ಕುರಿತು ತನ್ನ ನಿಲುವಿಗಾಗಿ ಅಲ್ಲಿದ್ದ ಗುಂಪಿನಿಂದ ‘ಶೇಮ್ ಶೇಮ್’ ಕೂಗುಗಳಿಂದಾಗಿ ಮುಜುಗರಕ್ಕೊಳಗಾಗಿದ್ದು ವರದಿಯಾಗಿದೆ.
ಜನಸಮೂಹವನ್ನು ಎದುರಿಸುತ್ತಿರುವ ಟ್ರುಡೋರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಮಸೀದಿಯಲ್ಲಿ ಸೇರಿದ್ದ ಕೆಲವು ಜನರು ಟ್ರುಡೋ ಭೇಟಿ ಸಂದರ್ಭದಲ್ಲಿ ಶೇಮ್,ಶೇಮ್ ಎಂದು ಕೂಗುತ್ತಿರುವುದನ್ನು ಮತ್ತು ವೇದಿಕೆಯಿಂದ ಮಾತನಾಡಲು ಅವರಿಗೆ ಅವಕಾಶ ನೀಡಬೇಡಿ ಎಂದು ವ್ಯವಸ್ಥಾಪಕರನ್ನು ಆಗ್ರಹಿಸುತ್ತಿರುವುದು ಕಂಡು ಬಂದಿದೆ. ಮಸೀದಿ ಆವರಣದಿಂದ ಟ್ರುಡೊ ತೆರಳುತ್ತಿದ್ದಂತೆ ಜನರ ಬೊಬ್ಬೆಗಳ ನಡುವೆಯೇ ಪ್ರತಿಭಟನಾಕಾರನೋರ್ವ ಫೆಲೆಸ್ತೀನ್‌ನ್ನು ಬೆಂಬಲಿಸುವ ಭಿತ್ತಿಪತ್ರವನ್ನು ಹಿಡಿದುಕೊಂಡಿದ್ದೂ ವೀಡಿಯೊದಲ್ಲಿ ದಾಖಲಾಗಿದೆ.
ಟ್ರುಡೊ ಟೊರೊಂಟೊದ ಎಟೋಬಿಕೋಕ್ ಪ್ರದೇಶದಲ್ಲಿಯ ಮಸೀದಿಗೆ ಭೇಟಿ ನಿಡಿದ್ದರು. ಈ ಭೇಟಿಯ ಬಗ್ಗೆ ಅವರ ಕಚೇರಿಯು ಸೂಚಿಸಿರಲಿಲ್ಲ ಮತ್ತು ಅದು ಅವರ ಪ್ರವಾಸ ಕಾರ್ಯಕ್ರಮದಲ್ಲಿಯೂ ಇರಲಿಲ್ಲ. ಮಧ್ಯಪ್ರಾಚ್ಯದಲ್ಲಿನ ಭೀಕರ ಘಟನೆಗಳಿಂದ ಮುಸ್ಲಿಮ್ ಸಮುದಾಯದಲ್ಲಿ ಪ್ರಭಾವಿತರಾದವರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಲು ಟ್ರುಡೊ ಶುಕ್ರವಾರ ಟೊರೊಂಟೊದಲ್ಲಿನ ಇಂಟರ್‌ನ್ಯಾಷನಲ್ ಮುಸ್ಲಿಮ್ಸ್ ಆರ್ಗನೈಸೇಶನ್‌ಗೆ ಭೇಟಿ ನೀಡಿದ್ದರು ಎಂದು ಪ್ರಧಾನಿ ಕಚೇರಿಯು ನಂತರ ದೃಢಪಡಿಸಿದೆ.
ಈ ನಡುವೆ ಪ್ರದೇಶದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸುವಂತೆ ಕೆನಡಾಕ್ಕೆ ಮುಸ್ಲಿಮ್ ಗುಂಪುಗಳ ಕರೆಗಳನ್ನು ಲಿಬರಲ್ ಸಂಸದರು ಬೆಂಬಲಿಸಿದ್ದರೆ, ಗಾಝಾ ಆಸ್ಪತ್ರೆಯ ಮೇಲೆ ದಾಳಿಗೆ ಇಸ್ರೇಲ್ ಹೊಣೆಗಾರನಾಗಿದೆ ಎಂಬ ಹಮಾಸ್ ಪ್ರತಿಪಾದನೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದ ತನ್ನ ಹಿಂದಿನ ಹೇಳಿಕೆಯನ್ನು ಹಿಂದೆಗೆದುಕೊಳ್ಳುವಂತೆ ಹಲವಾರು ಕೆನಡಿಯನ್ ಯಹೂದಿ ಗುಂಪುಗಳು ಟ್ರುಡೊರನ್ನು ಒತ್ತಾಯಿಸಿವೆ.
PM Justin Trudeau embarrassed and rejected from Canada Mosque pic.twitter.com/8NUhjYrzyr
— Mohammed Hijab (@mohammed_hijab) October 20, 2023