ಅಮೆಝಾನ್‌ನಲ್ಲಿ 90,000 ರೂ.ಗಳ ಕ್ಯಾಮೆರಾ ಲೆನ್ಸ್‌ಗೆ ಆರ್ಡರ್ ಮಾಡಿದ್ದ ಗ್ರಾಹಕನಿಗೆ ಬಂತು ನವಣೆ ಅಕ್ಕಿ ಪಾರ್ಸೆಲ್ !

Update: 2023-07-15 11:12 GMT

Photo: Twitter/@arunkmeher 

ಹೊಸದಿಲ್ಲಿ: ಹಲವಾರು ವ್ಯಕ್ತಿಗಳಿಗೆ ಇ-ಕಾಮರ್ಸ್ ಅಂತರ್ಜಾಲ ತಾಣದಲ್ಲಿ ವಸ್ತುಗಳಿಗೆ ಆರ್ಡರ್ ಮಾಡುವುದನ್ನು, ವಿಶೇಷವಾಗಿ ರಿಯಾಯಿತಿ ದರದ ಮಾರಾಟ ಋತುವಿನಲ್ಲಿ ಆರ್ಡರ್ ಮಾಡುವುದನ್ನು ಅಭ್ಯಾಸವಾಗಿಸಿಕೊಂಡಿದ್ದಾರೆ. ಆದರೆ, ಜನರು ತಾವು ಆರ್ಡರ್ ಮಾಡಿದ್ದಕ್ಕಿಂತ ಸಂಪೂರ್ಣ ಭಿನ್ನವಾದ ವಸ್ತುವನ್ನು ಹೇಗೆ ಸ್ವೀಕರಿಸಿದ್ದೇವೆ ಮತ್ತು ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಎಷ್ಟು ತ್ರಾಸದಾಯಕವಾಗಿರುತ್ತದೆ ಎಂಬುದರ ಕುರಿತು ಪದೇ ಪದೇ ದೂರುತ್ತಿರುತ್ತಾರೆ. ಇಂತಹುದೇ ಒಂದು ಅನುಭವವನ್ನು ಅಮೆಝಾನ್‌ನಿಂದ ರೂ. 90,000/- ಮೊತ್ತದ ಕ್ಯಾಮೆರಾ ಲೆನ್ಸ್‌ಗೆ ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರು ಹಂಚಿಕೊಂಡಿದ್ದಾರೆ.

ಅರುಣ್ ಕುಮಾರ್ ಮೆಹೆರ್ ಎಂಬ ಗ್ರಾಹಕರು ಜು. 5ರಂದು ಸಿಗ್ಮಾ 24-70 ಎಫ್ 2.8 ಲೆನ್ಸ್‌ಗಾಗಿ ಅಮೆಝಾನ್‌ಗೆ ಆರ್ಡರ್ ನೀಡಿದ್ದಾರೆ. ಆದರೆ, ಅವರು ಪಾರ್ಸೆಲ್ ಪೆಟ್ಟಿಗೆಯನ್ನು ತೆರೆದಾಗ ಆಘಾತಕ್ಕೊಳಗಾಗಿದ್ದಾರೆ. ಆ ಪೆಟ್ಟಿಗೆ ಅದಾಗಲೇ ತೆರೆದಿತ್ತು ಎಂದು ಆರೋಪಿಸಿರುವ ಅವರು, ಆ ಪೊಟ್ಟಣದಲ್ಲಿ ಕ್ಯಾಮೆರಾ ಲೆನ್ಸ್ ಬದಲು ನವಣೆ ಅಕ್ಕಿಯ ಕಾಳುಗಳಿದ್ದವು ಎಂದು ಆರೋಪಿಸಿದ್ದಾರೆ. ಲೆನ್ಸ್ ಪೆಟ್ಟಿಗೆಯಲ್ಲಿ ನವಣೆ ಅಕ್ಕಿಯ ಕಾಳುಗಳನ್ನು ತುಂಬಿರುವ ಒಂದೆರಡು ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೆಹೆರ್, "ಅಮೆಝಾನ್‌ನಿಂದ ರೂ. 90,000 ಮೌಲ್ಯದ ಕ್ಯಾಮೆರಾ ಲೆನ್ಸ್‌ಗಾಗಿ ಆರ್ಡರ್ ಮಾಡಿದ್ದೆ. ಆದರೆ, ಅವರು ಲೆನ್ಸ್ ಪೆಟ್ಟಿಗೆಯಲ್ಲಿ ಲೆನ್ಸ್ ಬದಲು ನವಣೆ ಅಕ್ಕಿ ಕಾಳುಗಳ ಪೊಟ್ಟಣ ತುಂಬಿಸಿ ಕಳಿಸಿದ್ದರು. @amazonIN ಹಾಗೂ Appario Retail ಸಂಸ್ಥೆಗಳಿಂದ ಭಾರಿ ಹಗರಣ ನಡೆದಿದೆ. ಆ ಲೆನ್ಸ್ ಪೆಟ್ಟಿಗೆಯೂ ತೆರೆದಿತ್ತು. ಆದಷ್ಟೂ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು" ಎಂದು ಆಗ್ರಹಿಸಿದ್ದಾರೆ.

"ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವುದಾಗಿ @amazonIN @amazon ಸಂಸ್ಥೆಯವರು ಹೇಳುತ್ತಿದ್ದಾರೆ. ಆದರೆ, ಈ ಕೆಲಸ ಆರಂಭಿಕ ಜಾಗದಲ್ಲೇ ಹೇಗಾಗಲು ಸಾಧ್ಯ? ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹ. ಈ ಸಮಸ್ಯೆಯನ್ನು ಆದಷ್ಟೂ ಕೂಡಲೇ ಬಗೆಹರಿಸಿ ಮತ್ತು ನಾನು ಆರ್ಡರ್ ಮಾಡಿರುವ ಲೆನ್ಸ್ ಕಳಿಸಿಕೊಡಿ ಆಥವಾ ನನ್ನ ಹಣವನ್ನು ಮರುಪಾವತಿ ಮಾಡಿ" ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, "@Flipkart ಅತ್ಯುತ್ತಮ. ನಾನು ನನ್ನ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಅನ್ನು @Flipkartನಿಂದಲೇ ಖರೀದಿಸಿದೆ. ಅವರು ತೆರೆದ ಪೆಟ್ಟಿಗೆಯ ಪೂರೈಕೆಯನ್ನು ಒದಗಿಸಿದ್ದಾರೆ. ಡೆಲಿವರಿ ಬಾಯ್ ನನ್ನೆದುರಿಗೇ ಪೆಟ್ಟಿಗೆಯನ್ನು ತೆರೆದ ಮತ್ತು ಎಲ್ಲವೂ ಸಮರ್ಪಕವಾಗಿ ಹಾಗೂ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿದ. ನಾನು ಅದರ ಸೇವೆಯಲ್ಲಿ ಈವರೆಗೆ ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ" ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

"ಎಲ್ಲ ಅಧಿಕ ಮೌಲ್ಯದ ವಸ್ತುಗಳ ವಿಚಾರದಲ್ಲೂ ಇದು ಸಾಮಾನ್ಯ ಸಂಗತಿಯಾಗಿರಬಹುದು. ಗ್ರಾಹಕರು ಪೂರೈಕೆಯನ್ನು ಸ್ವೀಕರಿಸುವವರೆಗೂ ಪೆಟ್ಟಿಗೆಯನ್ನು ತೆರೆಯಲು ಅಮೆಝಾನ್ ಅನುಮತಿ ನೀಡುವುದಿಲ್ಲ. ಅದಾದ ನಂತರ ಉತ್ಪನ್ನದಲ್ಲೇನಾದರೂ ಸಮಸ್ಯೆ ಕಂಡು ಬಂದರೆ ಅದು ಗ್ರಾಹಕನ ತಲೆನೋವಾಗುತ್ತದೆ. ಇದಕ್ಕಿಂತ ಅದರ ಹಿಂದಿರುಗಿಸುವ ನೀತಿ ಮತ್ತಷ್ಟು ಕಠಿಣವಾಗಿದೆ. ನಾನು ಕೂಡಾ ಅಧಿಕ ಮೌಲ್ಯದ ಕ್ಯಾಮೆರಾವನ್ನು ಮರಳಿಸಬೇಕಾದ ಸಂದರ್ಭವನ್ನು ಎದುರಿಸಿದ್ದೆ. ಅದನ್ನು ಮರಳಿ ಪಡೆಯಲು ಬಂದ ವ್ಯಕ್ತಿಯ ಬಳಿಯಲ್ಲಿನ ತಪಾಸಣಾ ಪಟ್ಟಿಯ ಪ್ರಕಾರ, ಕ್ಯಾಮೆರಾದೊಂದಿಗೆ ಕ್ಯಾಮೆರಾ ಕವಚವನ್ನೂ ಮರಳಿಸಬೇಕಿತ್ತು. ಸವಾಲೇನು ಗೊತ್ತೆ? ಆ ಉತ್ಪನ್ನವು ಕವಚದೊಂದಿಗೆ ಸಾಗಣೆಯಾಗಿರಲೇ ಇಲ್ಲ. ಹೀಗಾಗಿ ಮರಳಿ ಪಡೆಯುವ ಪ್ರಕ್ರಿಯೆ ನಡೆಯಲಿಲ್ಲ. ಹೀಗಿದ್ದೂ, ಕೊನೆಗೆ ಎಲ್ಲವೂ ಸುಗಮವಾಗಿ ಮುಗಿಯುವಂತೆ ಅವರು ನೋಡಿಕೊಂಡರು. ಆದರೆ, ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅವರ ಗ್ರಾಹಕ ಸೇವಾ ಪ್ರತಿನಿಧಿಗಳ ಅಗತ್ಯಕ್ಕೆ ತಕ್ಕಂತೆ ಹಲವಾರು ವಾರಗಳ ಕಾಲ ವ್ಯವಹರಿಸುವುದು ತೀರಾ ಕ್ಷೋಭೆಯ ಕ್ಷಣಗಳು" ಎಂದು ಮತ್ತೊಬ್ಬ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

"ಕಳೆದ ವರ್ಷ ನನಗೂ ಇದೇ ಬಗೆಯ ಅನುಭವವಾಯಿತು. ನಾನು ಸಿಗ್ಮಾ 150-600 ಲೆನ್ಸ್‌ಗಾಗಿ ಆರ್ಡರ್ ಮಾಡಿದ್ದೆ. ಅವರು ಸಿಗ್ಮಾ ಪ್ರಕರಣದ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಅವರು ನನಗೆ ಕೇವಲ ಹೊಲಿಗೆ ಯಂತ್ರ ಕಳುಹಿಸಿದ್ದರು" ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News