ಪತ್ರಕರ್ತೆ ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ವಿವೇಕ್‌ ಅಗ್ನಿಹೋತ್ರಿ; ಸಂದರ್ಶನದ ಮಧ್ಯದಲ್ಲೇ ಎದ್ದು ಹೋದ ‘ದಿ ಕಾಶ್ಮೀರ್ ಫೈಲ್ಸ್ʼ ನಿರ್ದೇಶಕ

Update: 2023-08-22 09:50 GMT

ವಿವೇಕ್ ಅಗ್ನಿಹೋತ್ರಿ (Photo: IANS )

ಮುಂಬೈ: ‘ದಿ ಕಾಶ್ಮೀರ್ ಫೈಲ್ಸ್ʼ ಎಂಬ ವಿವಾದಾತ್ಮಕ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಮಾಧ್ಯಮವೊಂದರ ಸಂದರ್ಶನದಿಂದ ಅರ್ಧದಿಂದ ಎದ್ದು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ.

ABC News In ನಡೆಸಿದ ಸಂದರ್ಶನದ ವೇಳೆ, ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ವಿವೇಕ್‌ ಅಗ್ನಿಹೋತ್ರಿ ಅವರು ಅರ್ಧದಿಂದಲೇ ಎದ್ದು ಹೋಗಿದ್ದಾರೆ.

ಕಾಶ್ಮೀರ್‌ ಫೈಲ್ಸ್‌ ಚಿತ್ರದ ಬಗ್ಗೆ ಸಂದರ್ಶಕಿ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದು, ಇದರಿಂದ ಅಗ್ನಿಹೋತ್ರಿ ಇರಿಸು-ಮುರಿಸುಗೊಳಗಾಗಿದ್ದಾರೆ. ಕಾಶ್ಮೀರ್‌ ಫೈಲ್ಸ್‌ ಚಿತ್ರ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುತ್ತದೆಯೇ ಎಂದು ಪ್ರಶ್ನಿಸಿದ ಸಂದರ್ಶಕಿಗೆ ಪ್ರತಿಕ್ರಿಯಿಸಿದ ಅಗ್ನಿಹೋತ್ರಿ, ಜಗತ್ತಿನಲ್ಲಿ ನಡೆಯುವ ಎಲ್ಲದಕ್ಕೂ ನಾನು ಜವಾಬ್ದಾರನಲ್ಲ. ಇದು ತಪ್ಪು ಎಂದು ಸ್ವತಃ ನಾನೇ ಟ್ವೀಟ್‌ ಮಾಡಿದ್ದೇನೆ ಎಂದಿದ್ದಾರೆ.

ಚಿತ್ರಕ್ಕೆ ಬಿಜೆಪಿ ಹಾಗೂ ಸರ್ಕಾರಗಳು ನೀಡಿದ ಬೆಂಬಲದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಅವರು, ಬಿಜೆಪಿ ಬೆಂಬಲಿಸಿದೆ, 4.5 ಕೋಟಿ ಜನರು ನನ್ನ ಸಿನೆಮಾ ನೋಡಿದ್ದಾರೆ, ಮಹಿಳೆಯರು, ಎಲ್‌ಜಿಬಿಟಿಕ್ಯೂ ಸಮುದಾಯದವರು ಬೆಂಬಲಿಸಿದ್ದಾರೆ ಎಂದಿದ್ದಾರೆ.

ಆದರೆ, ಚಿತ್ರದ ಪರವಾಗಿ ಸರ್ಕಾರ ಮಾಡಿರುವ ಪ್ರಚಾರ ಹಾಗೂ ಬೆಂಬಲವನ್ನು ಅಗ್ನಿಹೋತ್ರಿ ನಿರಾಕರಿಸಿದ್ದಾರೆ. ನಾನು ಬಿಜೆಪಿಯ ವಕ್ತಾರನಲ್ಲ, ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಸರ್ಕಾರವು ತಮ್ಮ ಚಲನಚಿತ್ರವನ್ನು ಪ್ರಚಾರ ಮಾಡಿಲ್ಲ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.

ಸರ್ಕಾರ ಮಾಡಿದ ಪ್ರಚಾರವನ್ನು ಉಲ್ಲೇಖಿಸಲು ಸಂದರ್ಶಕಿ ಮುಂದಾಗುತ್ತಿದ್ದಂತೆ, ಅಗ್ನಿಹೋತ್ರಿಯ ತಂಡದವರು ಸಂದರ್ಶನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಅಗ್ನಿಹೋತ್ರಿ ಕೂಡಾ ಸಂದರ್ಶನದಿಂದ ಎದ್ದು ಹೋಗಿದ್ದಾರೆ.

ಅರ್ಧದಿಂದ ಅಗ್ನಿಹೋತ್ರಿ ಎದ್ದು ಹೋಗುತ್ತಿರುವ ವಿಡಿಯೋ ತುಣುಕುಗಳಿಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಗುಜರಾತ್‌ ಹತ್ಯಾಕಾಂಡದ ಬಗ್ಗೆ ಹಿರಿಯ ಪತ್ರಕರ್ತ ಕರಣ್‌ ಥಾಪರ್‌ ಅವರು ಆಗಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ನಡೆಸಿದ ಸಂದರ್ಶನದಿಂದ ಮೋದಿ ಅವರು ಎದ್ದು ಹೋಗಿರುವುದನ್ನು ನೆನಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News