ʼಜಾತಿಗಣತಿʼ ಜಾರಿಗೆ ವಿರೋಧಿಸುತ್ತಿರುವುದು ಬೇಸರದ ಸಂಗತಿ: ಸಚಿವ ಜಿ.ಪರಮೇಶ್ವರ್

Update: 2024-01-21 09:23 GMT

ತುಮಕೂರು: ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ಸ್ಥಿತಿಗತಿಯನ್ನು ಅಧ್ಯಯನ‌ ನಡೆಸಿ, ಆ ಸಮುದಾಯಗಳ ಅಭಿವೃದ್ಧಿಗಾಗಿ ಜಾತಿಗಣತಿ ವರದಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತವಾಗುತ್ತಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ನಗರದಲ್ಲಿ ತಿಗಳರ ವಿದ್ಯಾಭಿವೃದ್ಧಿ ಸಂಘವು ನೂತನವಾಗಿ ನಿರ್ಮಿಸಿರುವ 'ವಿದ್ಯಾಸಿರಿ ಸಭಾಂಗಣ' ವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಎಲ್ಲ ಸಮುದಾಯಗಳು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂಬುದು ಸರಕಾರದ ಆಶಯ. ಸರಕಾರವು ನೀತಿ ರೂಪಿಸುವಾಗ, ಬಜೆಟ್ ನೀಡುವಾಗ ವರದಿಗಳು ಅನುಕೂಲವಾಗುತ್ತವೆ. ಜಾತಿಗಣತಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಸರಕಾರದ ಪ್ರತಿನಿಧಿಯಾಗಿ ಒತ್ತಾಯಿಸುತ್ತೇನೆ" ಎಂದರು.

ಸಮುದಾಯ ನಿರ್ಮಿಸಿರುವ ಸಭಾಂಗಣಕ್ಕೆ 'ವಿದ್ಯಾಸಿರಿ' ಎಂದು ಹೆಸರು ಇಟ್ಟಿರುವುದು ಖುಷಿ ತಂದಿದೆ. ಶಿಕ್ಷಣದಿಂದ ದೂರ ಉಳಿದಿರುವ ಸಮುದಾಯವು ಸಭಾಂಗಣಕ್ಕೆ ʼವಿದ್ಯಾಸಿರಿʼ ಅಂತ ಹೆಸರು ಇಟ್ಟಿರುವುದು ಮಕ್ಕಳ ಶಿಕ್ಷಣದ ಕಾಳಜಿಯನ್ನು ತೋರಿಸುತ್ತದೆ. ಸಮುದಾಯದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದು ಹೇಳಿದರು.

ನಮ್ಮ ವೃತ್ತಿಯನ್ನಷ್ಟೇ ಅವಲಂಬಿಸಿ ಬದುಕಲು ಸಾಧ್ಯವಿಲ್ಲ. ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ಒಬ್ಬ ವಿದ್ಯಾವಂತನಾಗಿ ಒಳ್ಳೆ ಕೆಲಸ, ಉನ್ನತ ಹುದ್ದೆಯನ್ನು‌ಅಲಂಕರಿಸಿದರೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತದೆ. ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ಹೆಚ್ಚು ಶ್ರಮಿಸಿದ ತಿಗಳರ ಸಮುದಾಯವನ್ನು ಮರೆಯುವುದಿಲ್ಲ. ಸಮುದಾಯದ ರಕ್ಷಣೆಗೆ ಯಾರಾದರೊಬ್ಬರು ಬೆನ್ನೆಲುಬಾಗಿ ನಿಂತುಕೊಳ್ಳಬೇಕು. ಇಲ್ಲವಾದರೆ ಆ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಇದರಿಂದ ಸಮುದಾಯದ ಅಭಿವೃದ್ಧಿಗೆ ಸಹಕಾರ ಸಿಗುವುದಿಲ್ಲ. ಹೀಗಾಗಿ, ತಿಗಳರ ಸಮುದಾಯದ ಅಭಿವೃದ್ಧಿಗೆ ನಾನು ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್, ತುಮಕೂರು ಮಹಾನಗರ ಪಾಲಿಕೆಯ ಉಪ ಮಹಾಪೌರ ನರಸಿಂಹಮೂರ್ತಿ, ಸಂಘದ ಅಧ್ಯಕ್ಷ ರಾಷ್ಟ್ರಪ್ರಶಸ್ತಿ ಪುರಸ್ಕೃತ ಎಂ.ಹನುಮದಾಸ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News