ತುಮಕೂರು: ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ 54 ಪೋಕ್ಸೋ ಪ್ರಕರಣಗಳು

Update: 2023-12-15 17:10 GMT

ತುಮಕೂರು: ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ 54 ಪೋಕ್ಸೋ ಪ್ರಕರಣಗಳು ದಾಖಲಾಗಿ ಎಫ್.ಐ.ಆರ್.ಆಗಿವೆ. ಅದರಲ್ಲಿ 5 ಪ್ರಕರಣಗಳು ಅಪ್ರಾಪ್ತ ಬಾಲಕಿಯರ ಮೇಲಾದ ದೌರ್ಜನ್ಯ ಪ್ರಕರಣಗಳಾಗಿವೆ.ಉಳಿದ ಪ್ರಕರಣಗಳು ಅಂತರಜಾತಿ ವಿವಾಹ,ಬಾಲ್ಯ ವಿವಾಹ,ಅಪ್ರಾಪ್ತರ ವಿವಾಹವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ತಿಳಿಸಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಮತ್ತು ಮಹಿಳಾ ಅಧ್ಯಯನ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಐ.ಕ್ಯೂ.ಎ.ಸಿ.,ವಿವಿವಿಜ್ಞಾನ ಕಾಲೇಜು ಇವರ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆ ಹೇಗೆ? ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

" 2013ರಲ್ಲಿ ಜಾರಿಯಾದ ‘ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆ’ ಕಾಯಿದೆ 1997ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ವಿಶಾಖ ಪ್ರಕರಣದ ಮಾರ್ಗಸೂಚಿಗಳನ್ನು, ಕಾಯಿದೆಯ ಹಿನ್ನೆಲೆಯನ್ನು ಪ್ರತಿಯೊಬ್ಬ ಹೆಣ್ಣು ತಿಳಿಯಬೇಕು.ರಾಜಸ್ತಾನದ ಗುಜ್ಜರ್ ಕುಟುಂಬದ ಹೆಣ್ಣುಮಗಳಾದ ಬನ್ವಾರೀದೇವಿಯ ಮೇಲಾದ ಸಾಮೂಹಿಕ ಅತ್ಯಾಚಾರದಿಂದ ಹೊರಬಂದ ತೀರ್ಪಿನಿಂದಾಗಿ ಮಹಿಳೆಯರ ಹಿತರಕ್ಷಣೆಗೆ ಕಾನೂನು ಭದ್ರ ಕೋಟೆಯನ್ನು ರಚಿಸಿತು "ಎಂದು ತಿಳಿಸಿದರು.

2013ರ ಕಾಯಿದೆ ಪ್ರಕಾರ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಹಿತಕ್ಕಾಗಿ ಆಂತರಿಕ ಸಮಿತಿ ರಚಿಸಬೇಕು.ಸಮಿತಿಯಲ್ಲಿ ಶೇ.50ರಷ್ಟು ಮಹಿಳೆಯರು ಇರಬೇಕು.ಸಂಸ್ಥೆಯಲ್ಲಿ 10ಕ್ಕಿಂತ ಕಡಿಮೆ ಮಹಿಳಾ ಉದ್ಯೋಗಿಗಳಿದ್ದಲ್ಲಿ ಸ್ಥಳೀಯ ಸಮಿತಿ ರಚಿಸಿ, ಜಿಲ್ಲಾಧಿಕಾರಿಗಳ ಉಸ್ತುವಾರಿಯಿರಬೇಕು.ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯವಾದಲ್ಲಿ ಸಮಿತಿಯ ಮುಖೇನ ಬಲಿಪಶುವಾದ ಹೆಣ್ಣುಮಗಳು ಲಿಖಿತ ರೂಪದಲ್ಲಿ ಪೋಲಿಸ್ ಠಾಣೆಗೆ ದೂರು ನೀಡಬೇಕು. ಅಪರಾಧಿಗೆ 3 ವರ್ಷ ಜೈಲು, 50,000 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಮಹಿಳೆಯರ ಖಾಸಗಿ ಬದುಕನ್ನು ಚಿತ್ರೀಕರಿಸಿಕೊಳ್ಳುವುದು, ಧ್ವನಿಮುದ್ರಿಸಿಕೊಳ್ಳುವುದು ದೊಡ್ಡ ಅಪರಾಧ.ಅಪರಾಧಿಗಳಿಗೆ 7 ವರ್ಷ ಸಜೆ ಖಂಡಿತ.ಅಪ್ರಾಪ್ತ ಬಾಲಕಿಯರನ್ನು ಮದುವೆಯಾದಲ್ಲಿ ಅಪಹರಣ,ಅತ್ಯಾಚಾರದ ಪ್ರಕರಣ ದಾಖಲಾಗುತ್ತದೆ.ಅಂಥವರಿಗೆ 20 ವರ್ಷ ಸಜೆ ಹಾಗೂ ಬದುಕು ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವಿ ಕುಲಸಚಿವೆ ನಾಹಿದಾ ಜೂಮ್, ಶಿಸ್ತು, ಮೌಲ್ಯಗಳಿಂದ ಕೂಡಿದ ಬದುಕು ವಿದ್ಯಾರ್ಥಿಗಳದ್ದಾಬೇಕು.ಬದಲಾವಣೆಯನ್ನು ತರುವ ಯುವಸಮಾಜ ಎಡವಬಾರದು.ಹೆಣ್ಣಾಗಿ ಹುಟ್ಟವುದೇ ಸಾಧನೆಯಾಗಿದೆ.ಆದರೂ ಹೆಣ್ಣು ಭ್ರೂಣ ಹತ್ಯೆಗಳ ಸಂಖ್ಯೆ ಏರುತ್ತಿದೆ.ಮಹಿಳೆಯರನ್ನು ಪ್ರೋತ್ಸಾಹಿಸುವ ಪ್ರಧಾನ ಸಮಾಜ ಬೇಕು ಎಂದು ಹೇಳಿದರು.

ವಿವಿ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News