ಉಡುಪಿ: ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಆಶ್ರಯದಲ್ಲಿ ಸಮಾಲೋಚನಾ ಸಭೆ

Update: 2023-11-18 09:34 GMT

ಉಡುಪಿ: ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಹಾಗೂ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಮತ್ತು ರುದ್ರ ಭೂಮಿಯಲ್ಲಿ ಚಿತಾಗಾರಗಳ ನಿರ್ಮಾಣ ಬಗ್ಗೆ ಸಮಾಲೋಚನಾ ಸಭೆಯು ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಆಶ್ರಯದಲ್ಲಿ ಉಡುಪಿ ಹೋಟೆಲ್ ಕಿದಿಯೂರು ಶೇಷಶಯನ ಸಭಾಗೃಹದಲ್ಲಿ ನಡೆಯಿತು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಎಲ್.ವಿ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಜಿಲ್ಲಾ ಸಮಿತಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.  ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿದ ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಜಿಲ್ಲಾಧ್ಯಕ್ಷ ಡಿ ಆರ್ ರಾಜು ಅವರು "ರಾಜ್ಯದ ಪ್ರವಾಸೋದ್ಯಮದಲ್ಲಿ ಕರಾವಳಿ ಕರ್ನಾಟಕದ ಪಾತ್ರ ಮಹತ್ತರವಾಗಿದೆ. ಕರಾವಳಿ ಕರ್ನಾಟಕದ ಉಳ್ಳಾಲದಿಂದ ಕಾರವಾರದವರೆಗಿನ ಸುಮಾರು 320 ಕಿ.ಮೀ ಸಮುದ್ರ ತೀರವು ನಿರಂತರವಾಗಿ ಪ್ರತೀವರ್ಷ ಕಡಲ್ಕೊರೆತದ ಹೊಡೆತಕ್ಕೆ ಸಿಲುಕಿದ್ದರೂ ಈವರೆಗೂ ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಅಭಿವೃದ್ಧಿ ವಿಚಾರದಲ್ಲಿ ಕರಾವಳಿಯ ಜಿಲ್ಲೆಗಳು ತೀರಾ ಹಿಂದುಳಿದಿವೆ. ಪ್ರಮುಖವಾಗಿ ನಮ್ಮ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ ಪಶ್ಚಿಮ ಘಟ್ಟದ ಶ್ರೇಣಿಯ ರಸ್ತೆಗಳ ಅಭಿವೃದ್ಧಿಯಾಗಬೇಕು. ಎಲ್ಲಾ ಪ್ರಮುಖ ಸಂಪರ್ಕ ರಸ್ತೆಗಳು ಚತುಷ್ಪಥ ರಸ್ತೆಗಳಾದರೆ ಮೂಲಸೌಕರ್ಯ ಅಭಿವೃದ್ಧಿಯಾಗುತ್ತದೆ.  ಜತೆಗೆ ಪ್ರವಾಸೋದ್ಯಮವೂ ಬೆಳೆಯಲು ಸಾಧ್ಯವಿದೆ ಎಂದರು.

ಕಡಲ್ಕೊರೆತ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯರ ತಾಂತ್ರಿಕ ಪರಿಣಿತ ತಂತ್ರಜ್ಞರ ಜತೆ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಕರಾವಳಿ ಜಿಲ್ಲೆಗಳ ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಹೊಸ ಅವಿಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಉದ್ಯೋಗದಾತ ಕಂಪೆನಿಗಳು ಬರಬೇಕು, ಈಗಿರುವ ವಿದ್ಯುತ್ ಕಂಪೆನಿಗಳಲ್ಲಿ ಶೇ 95ರಷ್ಟು ಹೊರರಾಜ್ಯದವರೇ ತುಂಬಿದ್ದು ಸ್ಥಳೀಯರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕರಾವಳಿ ಜಿಲ್ಲೆಗಳಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳು ಬೆಳೆಯಬೇಕಿದೆ.  ಪರಿಸರ ಸಂರಕ್ಷಣೆ, ನೆಲ, ಜಲದ ಸಂರಕ್ಷಣೆಯಲ್ಲಿ ನಮ್ಮ ಸಂಘಟನೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ, ಅರಣ್ಯ ನಾಶವನ್ನು ತಡೆಯುವ ನಿಟ್ಟಿನಲ್ಲಿ ರುದ್ರಭೂಮಿಗಳಲ್ಲಿ ವಿದ್ಯುತ್ ಚಿತಾಗಾರವನ್ನು ನಿರ್ಮಾಣ ಮಾಡಬೇಕೆನ್ನುವುದು ಸರ್ಕಾರಕ್ಕೆ ನಮ್ಮ ಒತ್ತಾಯವಾಗಿದೆ ಎಂದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕ್ರಷ್ಣ ಶೆಟ್ಟಿ ಮಾತನಾಡಿ, ಕಳೆದ 40 ವರ್ಷಗಳಿಂದ ಸರ್ಕಾರಗಳು ಕಡಲ್ಕೊರೆತ ಬಗ್ಗೆ ಕೆಲಸ ಮಾಡುತ್ತಾ ಬಂದಿದ್ದರೂ ಸಮಸ್ಯೆ ಬಗೆಹರಿದು ಸಮುದ್ರಕ್ಕೆ ಹಾಕಿದ ಕಲ್ಲುಗಳು ಭೂಮಟಕ್ಕೆ ತಲುಪುತ್ತಿಲ್ಲ. ಮಹಾರಾಷ್ಟ್ರ ಮಾದರಿಯಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡು ಹುಡುಕಬೇಕಾಗಿದೆ ಎಂದರು.

ರುದ್ರಭೂಮಿಗಳಲ್ಲಿ ವಿದ್ಯುತ್ ಚಿತಾಗಾರಗಳನ್ನು ರಚಿಸಲು ಸರಕಾರ ಮುಂದಾಗಬೇಕು ಆ ಮೂಲಕ ಪರಿಸರ ಹಾಗೂ ಅರಣ್ಯ ಸಂಪತ್ತನ್ನು ಉಳಿಸುವ ಕೆಲಸ ಆಗಬೇಕಿದೆ. ಮಾತ್ರವಲ್ಲದೆ ವಿದ್ಯುತ್ ಚಿತಾಗಾರದ ಸಾಮಾಗ್ರಿಗಳಿಗೆ ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಉಪಾಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಗೌರವ ಕೋಶಾಧಿಕಾರಿ ತುಳಸಿದಾಸ್ ಎಲ್ ಅಮೀನ್, ಪ್ರದೀಪ್ ಎನ್ ಆರ್ ಕಾರ್ಕಳ ,ಗೌರವ ಕಾರ್ಯದರ್ಶಿಗಳಾದ ಅರುಣ್ ಪ್ರಕಾಶ್ ಶೆಟ್ಟಿ, ಪ್ರೊ ಶಂಕರ್, ಮಾಜಿ ಅಧ್ಯಕ್ಷರುಗಳಾದ ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ್ ಯು ದೇವಾಡಿಗ ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News