ಸ್ಪಂದನ ಟ್ರೋಫಿ: ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ 10 ಲಕ್ಷ ರೂ. ಸಂಗ್ರಹ

ಮಣಿಪಾಲ, ಮಾ.22: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವ ಮಕ್ಕಳ ಸಹಾಯಾರ್ಥ ನಿಧಿಸಂಗ್ರಹಕ್ಕಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಮಣಿಪಾಲದ ಎಂಐಟಿಯ ಏರ್‌ಕಂಡೀಷನ್ ವಿಭಾಗದ ಜಂಟಿ ಆಶ್ರಯದಲ್ಲಿ ಎಂಐಟಿ ಮೈದಾನದಲ್ಲಿ ನಡೆದ ಸ್ಪಂದನ ಟ್ರೋಫಿ ಕ್ರಿಕೆಟ್ ಹಾಗೂ ತ್ರೋಬಾಲ್ ಟೂರ್ನಿಯಿಂದ ಒಟ್ಟು 10 ಲಕ್ಷ ರೂ. ನಿಧಿಯನ್ನು ಸಂಗ್ರಹಿಸಲಾಯಿತು.
ಪಂದ್ಯಾವಳಿಯನ್ನು ಮಣಿಪಾಲ ಮಾಹೆ ಕುಲಪತಿ ಲೆ.ಜ.(ಡಾ.) ಎಂ. ಡಿ.ವೆಂಕಟೇಶ್ ಉದ್ಘಾಟಿಸಿದರು. ಕೆಎಂಸಿಯ ಸಿಒಒ ಡಾ.ಆನಂದ್ ವೇಣುಗೋಪಾಲ್, ಮಾಹೆಯ ಸಿಒಒ ಡಾ.ರವಿರಾಜ ಎನ್.ಎಸ್ ಮತ್ತು ಮಾಹೆಯ ಸಲಹೆಗಾರ ಸಿ.ಜಿ.ಮುತ್ತಣ್ಣ, ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ಪೀಡಿತ ಕೆಲವು ಮಕ್ಕಳೊಂದಿಗೆ ಮಾಹೆ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಆಟಗಾರರು, ಅಧ್ಯಾಪಕರು ಮತ್ತು ಹಿರಿಯ ನಿರ್ವಹಣಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಪಂದ್ಯಾವಳಿಯಿಂದ ಒಟ್ಟಾರೆಯಾಗಿ 10 ಲಕ್ಷ ರೂ.ಗಳನ್ನು ಸಂಗ್ರಹಿಸಲಾ ಗಿದ್ದು, ಇದನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಬಳಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ವಿಜೇತರು: ಕ್ರಿಕೆಟ್‌ನಲ್ಲಿ ಚಂದ ತಂಡ ಚಾಂಪಿಯನ್ ಹಾಗೂ ಚಂದು ತಂಡ ರನ್ನರ್ ಅಪ್. ಥ್ರೋಬಾಲ್ ನಲ್ಲಿ ಸನ್ವಿತ್ ತಂಡ ಚಾಂಪಿಯನ್ ಹಾಗೂ ಮಿಥುನ್ ತಂಡ ರನ್ನರ್ ಅಪ್.