ಉಡುಪಿ ಜಿಲ್ಲೆಯಾದ್ಯಂತ ಮುಂದುವರೆದ ಗಾಳಿಮಳೆ: 151 ವಿದ್ಯುತ್ ಕಂಬಗಳು ಧರೆಗೆ

Update: 2024-06-10 15:38 GMT

ಉಡುಪಿ, ಜೂ.10: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದ ಕಳೆದ ಮೂರು ದಿನಗಳಲ್ಲಿ ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಗಾಳಿ ಮಳೆಯಿಂದ ಜಿಲ್ಲೆಯಲ್ಲಿ ಒಟ್ಟು 151 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದಿದ್ದು, 20 ಟ್ರಾನ್ಸ್‌ಫಾರ್ಮರ್ ಹಾಗೂ 3.13ಕಿ.ಮೀ. ಉದ್ದದ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಇದರಿಂದ ಮೆಸ್ಕಾಂ ಇಲಾಖೆಗೆ ಒಟ್ಟು 25.72ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ನಗರದಲ್ಲಿ ಹಾನಿ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಗಾಳಿ ಮಳೆಯಿಂದ ಉಡುಪಿ ನಗರದ ಕೆಲವು ತಗ್ಗು ಪ್ರದೇಶಗಳು ಜಲಾವೃತ ಗೊಂಡಿದೆ. ಶಿರಿಬೀಡು ಮಂಜುನಾಥ ಕಣ್ಣಿನ ಆಸ್ಪತ್ರೆಯ ಸಮೀಪ ಮರವೊಂದು ಗಾಳಿಮಳೆಗೆ ಧರೆಗೆ ಉರುಳಿ ಬಿದಿದ್ದು, ಇದರಿಂದ ಅಲ್ಲೇ ಸಮೀಪದ ಮನೆಯ ಆವರಣ ಗೋಡೆಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ನಗರದ ಸಿಟಿ ಬಸ್ ನಿಲ್ದಾಣದ ಸಮೀಪದ ಮಠದ ಬೆಟ್ಟುವಿಗೆ ಹೋಗುವ ಮಾರ್ಗದಲ್ಲಿ ಆರ್‌ಎಸ್‌ಬಿ ವಸತಿ ಸಮುಚ್ಛಯದ ಹತ್ತಿರ ರಸ್ತೆಯಲ್ಲಿಯೇ ನೀರು ನಿಂತು ಇಡೀ ರಸ್ತೆ ಕೆಸರುಮಯವಾಗಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ರಸ್ತೆಯ ಅಂಚಿನಲ್ಲಿರುವ ತೋಡಿನ ಮಣ್ಣು ತೆಗೆಯದ ಪರಿಣಾಮ ಈ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇಲ್ಲಿನ ತೋಡಿನ ಮಣ್ಣು ತೆಗೆದು ಸರಿಯಾಗಿ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿಲ್ಲ. ಹಾಗಾಗಿ ರಸ್ತೆಯಲ್ಲ ಕೆಸರು ನೀರು ತುಂಬಿದೆ. ಆದಷ್ಟು ಬೇಗ ನಗರಸಭೆ ರಸ್ತೆ ಅಂಚಿನಲ್ಲಿರುವ ತೋಡಿನ ಮಣ್ಣನ್ನು ತೆಗೆದು ಮಳೆಗಾಲದ ನೀರು ಸುಗಮವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ನಗರ ಸಭೆಯನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News