ಕೊಂಕಣ ರೈಲ್ವೆಯಲ್ಲಿ 190 ಹುದ್ದೆಗಳ ಭರ್ತಿಗೆ ಕ್ರಮ: ಎಸ್.ಕೆ.ಝಾ

Update: 2024-10-15 16:01 GMT

ಉಡುಪಿ, ಅ.15: ಕಳೆದ ಆರ್ಥಿಕ ವರ್ಷದಲ್ಲಿ ಕೊಂಕಣ ರೈಲ್ವೆ ತನ್ನ ಇತಿಹಾಸದಲ್ಲೇ ಅತ್ಯಧಿಕವಾದ 301.75 ಕೋಟಿ ರೂ. ಲಾಭವನ್ನು ಗಳಿಸಿದೆ ಎಂದು ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂತೋಷ್ ಕುಮಾರ್ ಝಾ ತಿಳಿಸಿದ್ದಾರೆ.

ಗೋವಾದ ಮಡಗಾಂವ್ ರವೀಂದ್ರ ಭವನದಲ್ಲಿ ಇಂದು ನಡೆದ ಕೊಂಕಣ ರೈಲ್ವೆ ನಿಗಮದ 34ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಕೊಂಕಣ ರೈಲ್ವೆ ನಿಗಮದ ನೌಕರರ ಅವಿರತ ಶ್ರಮ ಹಾಗೂ ಪ್ರಯತ್ನಗಳಿಂದ ಇದು ಸಾಧ್ಯವಾಗಿದೆ ಎಂದರು.

ಕೊಂಕಣ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ವಿಭಾಗಗಳಲ್ಲಿ 190 ಹುದ್ದೆಗಳ ಭರ್ತಿಗೆ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ತಿಳಿಸಿದ ಝಾ, ನಿಗಮವು 1,700 ಕೋಟಿ ರೂ.ಮೌಲ್ಯ ಹೊಸ ಯೋಜನೆಗಳನ್ನು ಪಡೆದಿದೆ. ಇವುಗಳಲ್ಲಿ 850 ಕೋಟಿ ರೂ. ಇಲೆಕ್ಟ್ರಿಕಲ್, 769 ಕೋಟಿ ರೂ. ಇಂಜಿನಿಯರಿಂಗ್ ಹಾಗೂ 69 ಕೋಟಿ ರೂ. ಸಿಗ್ನಲ್ ಮತ್ತು ಟೆಲಿಕಾಂ ಕಾಮಗಾರಿಗಳು ಸೇರಿವೆ ಎಂದರು.

ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ, ಹಲವು ಅವಘಡಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಿದ ಹಳಿ ನಿರ್ವಹಣಾ ಸಿಬ್ಬಂದಿಗಳಿಗೆ ಸ್ಥಳದಲ್ಲೇ ನಗದು ಬಹುಮಾನ ನೀಡುವ ಯೋಜನೆಯನ್ನು ಕಾರ್ಯಗತ ಗೊಳಿಸಲಾಗಿದ್ದು, ಸಾಕಷ್ಟು ಮಂದಿಗೆ ಈಗಾಗಲೇ ನಗದು ಬಹುಮಾನ ನೀಡಲಾಗಿದೆ ಎಂದರು.

ಈ ಆರ್ಥಿಕ ವರ್ಷದಲ್ಲಿ ಕೊಂಕಣ ರೈಲ್ವೆಯು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇವುಗಳಲ್ಲಿ ಮಹಾತ್ಮಗಾಂಧಿ ಫೌಂಡೇಷನ್‌ನ ಮಹಾತ್ಮ ಪ್ರಶಸ್ತಿ, ನೇಷನ್ ಬಿಲ್ಡಿಂಗ್ ಅವಾರ್ಡ್‌ನಲ್ಲಿ ಬೆಸ್ಟ್ ಪಿಎಸ್‌ಯು, ಸ್ಟಾರ್ ಆಫ್ ಇಂಡಸ್ಟ್ರೀ ಅವಾರ್ಡ್ ಸೇರಿವೆ ಎಂದರು.

ರೈಲ್ವೆ ಸಚಿವಾಲಯವು 1,486 ಕೋಟಿ ರೂ.ಗಳ ಈಕ್ವಿಟಿಗೆ ಮಂಜೂರಾತಿ ನೀಡಿದೆ ಎಂದ ಅವರು, ಈ ಬಾರಿ ಚೌತಿ ಸಂದರ್ಭದಲ್ಲಿ 304 ವಿಶೇಷ ಗಣಪತಿ ರೈಲುಗಳನ್ನು ಓಡಿಸಲಾಗಿದೆ ಎಂದರು. ಪ್ರಯಾಣಿಕರ ಬಹುಕಾಲದ ಬೇಡಿಕೆಯಂತೆ ಈ ವರ್ಷ ಬಾಂದ್ರಾ ಟರ್ಮಿನಸ್ ಹಾಗೂ ಮಡಗಾಂವ್ ನಡುವೆ ವಾರಕ್ಕೆರಡು ಬಾರಿ ಸಂಚರಿಸುವ ರೈಲನ್ನು ಓಡಿಸಲಾಗು ತ್ತಿದೆ. ಅದೇ ರೀತಿ ಕಾಚಿಗುಡ ಮತ್ತು ಮಂಗಳೂರು ನಡುವೆ ಸಂಚರಿಸುತಿದ್ದ ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲಾ ಗಿದೆ. ಇದರಿಂದ ಕರಾವಳಿಯಿಂ ತಿರುಪತಿಗೆ ನೇರ ಸಂಪರ್ಕ ಸಾಧ್ಯವಾಗಿದೆ ಎಂದರು.

ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಗುರುತಿಸಿ ಅವರಿಗೆ ವಿವಿಧ ಪ್ರಶಸ್ತಿ, ಮೆಚ್ಚುಗೆ ಪತ್ರ ಹಾಗೂ ಬಹುಮಾನ ಗಳನ್ನು ವಿತರಿಸಲಾಯಿತು. ಇದರೊಂದಿಗೆ ಕೊಂಕಣ ರೈಲ್ವೆಯ ಎಲ್ಲಾ ಸಿಬ್ಬಂದಿಗಳಿಗೂ ಈ ವರ್ಷ ತಲಾ 17,951 ರೂ. ಎಕ್ಸ್‌ಗ್ರೇಷಿಯಾ ಮೊತ್ತವನ್ನು ಸಿಎಂಡಿ ಝಾ ಅವರು ಘೋಷಿಸಿದರು.

ಸುಧಾ ಸೇರಿದಂತೆ 7 ಮಂದಿಗೆ ಪ್ರಶಸ್ತಿ

ಮಡಗಾಂವ್‌ನಲ್ಲಿ ಇಂದು ನಡೆದ ಕೊಂಕಣ ರೈಲ್ವೆಯ 34ನೇ ಸಂಸ್ಥಾಪಕರ ದಿನಾಚರಣೆಯಲ್ಲಿ ಮಂಗಳೂರು ಕೊಂಕಣ ರೈಲ್ವೆಯ ಪಿಆರ್‌ಓ ಸುಧಾ ಕೃಷ್ಣಮೂರ್ತಿ ಸೇರಿದಂತೆ ರಾಜ್ಯ ಕರಾವಳಿಯ ಏಳು ಮಂದಿಗೆ ನಿರ್ದೇಶಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಯೊಂದಿಗೆ ಸನ್ಮಾನಿಸಲ್ಪಟ್ಟ ಇತರ ಸಿಬ್ಬಂದಿಗಳೆಂದರೆ ಭಟ್ಕಳ ನಿಲ್ದಾಣದ ಶಾಂತಲಾ ಶೆಟ್ಟಿ, ಮಂಗಳೂರಿನ ಹೆಡ್ ಟಿಕೆಟ್ ಪರೀಕ್ಷಕ ರಾದ ನಾರಾಯಣ ಹೆಗಡೆ, ಚಂದ್ರಕಾಂತ ಶೇಟ್, ಹರೀಶ್ ಪೂಜಾರಿ, ಶಿರೂರು ನಿಲ್ದಾಣದ ಸ್ಟೇಶನ್ ಮಾಸ್ಟರ್ ಪದ್ಮಾವತಿ, ಪಡುಬಿದ್ರಿ ನಿಲ್ದಾಣದ ಸ್ಟೇಶನ್ ಹೌಸ್ ಕೀಪರ್ ಶಾಂತಾ ಮೂಲ್ಯ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News