ಅ.18,19: ಉಡುಪಿಯಲ್ಲಿ ಟೀಚರ್ ಶೈಕ್ಷಣಿಕ ಹಬ್ಬ

Update: 2024-10-15 15:57 GMT

ಉಡುಪಿ, ಅ.15: ಬೆಂಗಳೂರಿನಲ್ಲಿರುವ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಹೊರತರುತ್ತಿರುವ ‘ಟೀಚರ್’ ಮಾಸಪತ್ರಿಕೆಯ ವತಿಯಿಂದ ಸಮಿತಿಯ ಉಡುಪಿ ಜಿಲ್ಲಾ ಘಟಕ ಈ ಬಾರಿಯ ‘ಟೀಚರ್ ಶೈಕ್ಷಣಿಕ ಹಬ್ಬ’ವನ್ನು ಅ.18 ಮತ್ತು 19ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಶೈಕ್ಷಣಿಕ ಹಬ್ಬ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಭಾರತರತ್ನ ಪ್ರೊ.ಸಿ.ಎನ್.ಆರ್. ರಾವ್ ಅವರ ನೇತೃತ್ವದಲ್ಲಿ ಸಮಾನ ಮನಸ್ಕ ವಿಜ್ಞಾನಿಗಳು ಹಾಗೂ ಶಿಕ್ಷಕರು ಸೇರಿ ನಾಲ್ಕು ದಶಕಗಳ ಹಿಂದೆ ಬಿಜಿವಿಎಸ್ ಸಂಸ್ಥೆಯನ್ನು ಸ್ಥಾಪಿಸಿದ್ದು, ವಿಜ್ಞಾನವನ್ನು ಜನಪ್ರಿಯ ಗೊಳಿಸುವುದು, ಶಿಕ್ಷಣ ಎಲ್ಲರಿಗೂ ಲಭ್ಯವಾಗುವಂತೆ ಮಾಡಿ ದೇಶದ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವುದು ಈ ಸಂಸ್ಥೆಯ ಪ್ರಮುಖ ಧ್ಯೇಯ ವಾಗಿದೆ ಎಂದರು.

ಕಳೆದ 22 ವರ್ಷಗಳಿಂದ ಬಿಜಿವಿಎಸ್ ಸಂಸ್ಥೆ ಹೊರತರುತ್ತಿರುವ ‘ಟೀಚರ್’ ಮಾಸಿಕ ಶಿಕ್ಷಣ, ವಿಜ್ಞಾನ, ಪರಿಸರ ಹಾಗೂ ತಂತ್ರಜ್ಞಾನದ ಕುರಿತು ಕನ್ನಡದ ದಲ್ಲಿ ಪ್ರಕಟಗೊಳ್ಳುತ್ತಿರುವ ಏಕೈಕ ಪತ್ರಿಕೆಯಾಗಿದೆ ಎಂದು ಸಮ್ಮೇಳನದ ಕುರಿತು ವಿವರಿಸುತ್ತಾ ಪತ್ರಿಕೆಯ ಸಂಪಾದಕ ಹಾಗೂ ಸಮಿತಿಯ ಉಪಾಧ್ಯಕಷ ಉದಯ ಗಾಂವಕರ್ ತಿಳಿಸಿದರು.

ಟೀಚರ್ ಪತ್ರಿಕೆ ಪ್ರತಿವರ್ಷ ಶಿಕ್ಷಣದ ಕುರಿತು ಚರ್ಚೆ, ಸಂವಾದ ನಡೆಸಲು ಪ್ರತಿವರ್ಷ ನಡೆಸುತಿದ್ದ ಶೈಕ್ಷಣಿಕ ಹಬ್ಬ ಕೋವಿಡ್ ಕಾರಣದಿಂದ 2019ರ ಬಳಿಕ ನಿಂತಿದ್ದು, ಇದೀಗ ಮೊದಲ ಬಾರಿ ಉಡುಪಿಯಲ್ಲಿ ನಡೆಯುತ್ತಿದೆ. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ 250ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಶೈಕ್ಷಣಿಕ ಬಿಕ್ಕಟ್ಟುಗಳೊಂದಿಗೆ ವರ್ತಮಾನದ ಮುಖಾಮುಖಿ ಎಂಬ ಹೆಸರಿನಲ್ಲಿ ನಡೆಯುವ ವಿವಿಧ ಗೋಷ್ಠಿಗಳಲ್ಲಿ ಶೈಕ್ಷಣಿಕ ನೀತಿಗಳು, ಅವುಗಳ ಅನುಷ್ಠಾನದಲ್ಲಿ ಎದುರಾಗಿರುವ ಸವಾಲುಗಳ ಕುರಿತು ಚರ್ಚೆ, ಉಪನ್ಯಾಸ, ಸಂವಾದ ಗಳು ನಡೆಯಲಿವೆ. ಎರಡು ದಿನಗಳಲ್ಲಿ ಒಟ್ಟು ಆರು ಗೋಷ್ಠಿಗಳು ನಡೆಯಲಿವೆ ಎಂದು ಉದಯ ಗಾಂವಕರ್ ತಿಳಿಸಿದರು.

ಸಮ್ಮೇಳನವನ್ನು ಅ.18ರ ಬೆಳಗ್ಗೆ 10ಗಂಟೆಗೆ ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲ ಪತಿಗಳಾದ ಪ್ರೊ.ರಾಮ್ ರಾಮಸ್ವಾಮಿ ಅವರು ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಿಜಿವಿಎಸ್‌ನ ಕೋಶಾಧಿಕಾರಿ ಹಾಗೂ ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಥಮ್ಯಾಟಿಕ್ಸ್‌ನ ಗಣಿತಜ್ಞ ಪ್ರೊ.ಕಮಲ್ ಲೊಡಾಯ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆಯಾಗಿದ್ದ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಬಿ.ಬಿ.ಕಾವೇರಿ ವಿಶೇಷ ಅತಿಥಿ ಯಾಗಿ ಸಭೆಯಲ್ಲಿ ಭಾಗವಹಿಸುವರು.ಉಡುಪಿಯ ಖ್ಯಾತ ಶಿಕ್ಷಣ ತಜ್ಞರಾದ ಡಾ.ಮಹಾಬಲೇಶ್ವರ ರಾವ್ ಅವರು ಪ್ರಸ್ತುತ ಶೈಕ್ಷಣಿಕ ಸವಾಲುಗಳ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮಿತಿಯ ವಿವಿಧ ಪದಾಧಿಕಾರಿಗಳು ವೇದಿಕೆಯಲ್ಲಿರುವರು.

ಬಳಿಕ ನಡೆಯುವ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಗೋಷ್ಠಿಗಳಲ್ಲಿ ಖ್ಯಾತನಾಮ ಶೈಕ್ಷಣಿಕ ಚಿಂತಕರಾದ ಪ್ರೊ.ಅನಿತಾ ರಾಂಪಾಲ್, ಅಜೀಂ ಪ್ರೇಮ್‌ಜಿ ವಿವಿಯ ಗಣಿತಜ್ಞರಾದ ಪ್ರೊ.ರಾಮಾನುಜನ್, ಹೆಸರಾಂತ ರಂಗ ನಿರ್ದೇಶಕ ಡಾ.ಶ್ರೀಪಾ ದರ್ ಭಟ್, ಜಿನೇವಾ ಗ್ರಾಜ್ಯುವೇಟ್ ಸಂಸ್ಥೆಯ ಅದಿತಿ ದೇಸಾಯಿ ಅವರೊಂದಿಗೆ ಸಂಶೋಧಕರು, ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದ ಸಮಾರೋಪ ಸಮಾರಂಭ ಅ.19ರ ಅಪರಾಹ್ನ 2:30ಕ್ಕೆ ನಡೆಯಲಿದೆ ಎಂದರು.

ಅ.18ರ ಸಂಜೆ 6:30ಕ್ಕೆ ಯತೀಶ್ ಕೊಳ್ಳೆಗಾಲ ನಿರ್ದೇಶನದಲ್ಲಿ ಅರಿವು ರಂಗ ಪಯಣ ತಂಡದಿಂದ ‘ಕ್ಯೂಇಡಿ’ ಎಂಬ ವಿಜ್ಞಾನಕ್ಕೆ ಸಂಬಂಧಿಸಿದ ನಾಟಕ ಪ್ರದರ್ಶನವಿರುತ್ತದೆ ಎಂದೂ ಉದಯ ಗಾಂವಕರ್ ತಿಳಿಸಿದರು.

ಪತಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಉಪಾಧ್ಯಕ್ಷ ಶುಭಂಕರ ಚಕ್ರವರ್ತಿ ಹಾಗೂ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯಕ್ ಪಟ್ಲ ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News