ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ| ಕಾನೂನು ಕ್ರಮಕ್ಕೆ ಸೈಬರ್ ಕ್ರೈಮ್‌ಗೆ ದೂರು: ಪ್ರಸಾದ್‌ರಾಜ್

Update: 2024-10-15 16:24 GMT

ಉಡುಪಿ: ನನ್ನ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಅಪಪ್ರಚಾರ ನಡೆಸುತ್ತಿರುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಾನು ಸೈಬರ್ ಕ್ರೈಮ್‌ಗೆ ದೂರು ಸಲ್ಲಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ಪ್ರಸಾದ್‌ರಾಜ್ ಕಾಂಚನ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಿಂದ ಸ್ಪರ್ಧಿಸಿದ್ದ ತಾನು ಆ ಸಮಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಉಡುಪಿಯ ಮಸೀದಿಗೆ ಭೇಟಿ ನೀಡಿದ ಫೋಟೊ ವನ್ನು ಕೆಲವು ದುಷ್ಕರ್ಮಿಗಳು ಎಡಿಟ್ ಮಾಡಿ ಮುಸ್ಲಿಂ ಸಮಾಜದ ಟೋಪಿಯನ್ನು ನನಗೆ ತಲೆಗೆ ಇರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚುರ ಪಡಿಸಿದ್ದರು ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಾನು ಹಿಂದು ವಿರೋಧಿ ಎಂಬಂತೆ ಪ್ರಚಾರ ಮಾಡಿ ನನ್ನ ಸೋಲಿಗೆ ಕಾರಣರಾಗಿದ್ದಾರೆ. ಅದೇ ಎಡಿಟ್ ಮಾಡಿದ ಫೋಟೊವನ್ನು ಈಗ ಕಿಡಿಗೇಡಿಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹಾಕಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವದ ಸಂದರ್ಭದಲ್ಲಿ ಬಳಸಿ, ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರಿಗೆ ದೇವಸ್ಥಾನದಲ್ಲಿ ಸನ್ಮಾನ ಮಾಡಲು ನಾನು ಕಾರಣಕರ್ತನೆಂದು ಸುಳ್ಳು ಪ್ರಚಾರ ಮಾಡುತಿದ್ದಾರೆ ಎಂದು ಅವರು ದೂರಿದರು.

ಉಚ್ಚಿಲ ದೇವಸ್ಥಾನದಲ್ಲಿ ನಡೆದ ಸನ್ಮಾನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅದು ನನಗೆ ಗೊತ್ತೂ ಇರಲಿಲ್ಲ. ಆದರೆ ಅದಕ್ಕೂ ನನಗೂ ಸಂಬಂಧ ಕಲ್ಪಿಸಿ ಸುಳ್ಳು ಪ್ರಚಾರ ಮಾಡುವ ಮೂಲಕ ರಾಜಕೀಯವಾಗಿ ನನ್ನನ್ನು ಹಣಿಯಲು ಕೆಲವು ದುಷ್ಕರ್ಮಿಗಳು ಸಂಚು ರೂಪಿಸಿದ್ದಾರೆ ಎಂದವರು ಆರೋಪಿಸಿದರು.

ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ತಾವು ಪೊಲೀಸ್ ಅದಿಕಾರಿಗಳನ್ನು ಕೋರಿರುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News