ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಕೇಂದ್ರದ ವರಿಷ್ಠರಿಂದ ತೀರ್ಮಾನ: ಬಿ ವೈ ವಿಜಯೇಂದ್ರ

Update: 2024-10-15 16:04 GMT

ಉಡುಪಿ: ರಾಜ್ಯದಲ್ಲಿ ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಚನ್ನಪಟ್ಟಣ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಾಳೆಯ ದಿನ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸಂಡೂರು ಮತ್ತು ಶಿಗ್ಗಾವಿ ಬಗ್ಗೆ ಇವತ್ತು ರಾತ್ರಿ ಚರ್ಚೆ ಮಾಡಲಾಗುವುದು. ಅಭ್ಯರ್ಥಿ ಯಾರು ಎಂಬ ಪಟ್ಟಿಯನ್ನು ಕಳುಹಿಸಿಕೊಡಲಾಗುವುದು. ನಾಳೆ ಅಥವಾ ನಾಡಿದ್ದು ಅಂತಿಮ ತೀರ್ಮಾನ ಮಾಡಲಾಗುತ್ತದೆ. ಮೂರೂ ಕ್ಷೇತ್ರಗಳಲ್ಲಿ ಗೆಲ್ಲುವುದು ಬಿಜೆಪಿಯ ಗುರಿಯಾ ಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಗೆ ನಮ್ಮ ಕಾರ್ಯಕರ್ತರು ಸಜ್ಜಾಗಿ ದ್ದಾರೆ. ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಂದೋಲನ ಮಾಡಿದ್ದೇವೆ. ಅಭಿವೃದ್ಧಿ ಶೂನ್ಯ ಸರಕಾರದ ವಿರುದ್ಧ ಜನ ಆಕ್ರೋಷಿತರಾಗಿದ್ದಾರೆ. ಇದರ ಪರಿಣಾಮ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಮತದಾರರು ನಮಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದರು.

ಚುನಾವಣೆ ಸ್ಪರ್ಧಿಸುವ ಸಂಬಂಝ ಯೋಗೇಶ್ವರ್ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ. ನಮ್ಮ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಸಂಪರ್ಕದಲ್ಲಿದ್ದಾರೆ. ನಮ್ಮ ಪಕ್ಷದ ಹಿರಿಯ ನಾಯಕರು ಅವರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಖರ್ಗೆ ಸೈಟ್ ವಾಪಸ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳ ರೇಸ್‌ ನಲ್ಲಿ ಇರುವವರ ಪಟ್ಟಿ ದೊಡ್ಡದಿದೆ. ಸದ್ಯದಲ್ಲೇ ಯಾರೆಲ್ಲ ಇದ್ದಾರೆ ಎಂಬುದು ಬಹಿರಂಗವಾಗಲಿದೆ. ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕ ಸಿದ್ದರಾಮಯ್ಯ ರಾಜೀನಾಮೆ ಕೊಡಲೇ ಬೇಕಾದ ಸಂದರ್ಭ ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು ಅನೇಕ ಹಿರಿಯರು ಕಾಯುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News