ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಪೋಕ್ಸೋ ಆರೋಪಿಗೆ 20 ವರ್ಷಗಳ ಕಠಿಣ ಜೈಲುಶಿಕ್ಷೆ

Update: 2024-06-12 14:39 GMT

ಉಡುಪಿ, ಜೂ.12: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2023ರ ಜುಲೈ ತಿಂಗಳಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೊ ಆರೋಪಿ ಉಡುಪಿ ಹೆಚ್ಚುವರಿ ಜಿಲ್ಲಾ ಪೊಕ್ಸೋ ವಿಶೇಷ ನ್ಯಾಯಾಲಯವು 20ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದೆ.

ಬೈಂದೂರು ನಿವಾಸಿ ಮಧುಕರ ಮರಾಠಿ(24) ಶಿಕ್ಷೆಗೆ ಗುರಿಯಾದ ಆರೋಪಿ. ನೊಂದ ಬಾಲಕಿಯು ಆರೋಪಿಯ ಸಂಬಂಧಿಕನಾಗಿದ್ದು, ತನ್ನ ಮನೆಗೆ ಬಂದ ನೊಂದ ಬಾಲಕಿಯನ್ನು ಮಧುಕರ ಮರಾಠಿ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ವಿಚಾರ ಬೇರೆಯವರಲ್ಲಿ ಹೇಳಿದರೆ ನಿನ್ನ ಬಗ್ಗೆ ಅಪ್ರಚಾರ ಮಾಡುವುದಾಗಿ ಆತ ಬಾಲಕಿಗೆ ಬೆದರಿಕೆಯೊಡ್ಡಿದ್ದನು.

ನಂತರ ಮಧುಕರ, ಯಾರು ಇಲ್ಲದ ಸಮಯ ಆಕೆಯ ಮನೆಗೆ ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ವಿಚಾರವನ್ನು ಕೂಡ ಯಾರಲ್ಲಿಯೂ ಹೇಳದಂತೆ ಬೆದರಿಕೆಯೊಡ್ಡಿದ್ದನು ಎಂದು ದೂರಲಾಗಿದೆ. ನಂತರ ಬಾಲಕಿಯ ಆರೋಗ್ಯದಲ್ಲಿ ವ್ಯಾತ್ಯಾಸ ಕಂಡುಬಂದಿದ್ದು, ಮನೆಯವರು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಕೆ ಗರ್ಭವತಿಯಾಗಿರುವುದು ತಿಳಿದುಬಂತು.

ಈ ಬಗ್ಗೆ ವೈದ್ಯರು ಪೊಲೀಸ್ ಠಾಣೆಗೆ ಸೂಕ್ತ ಕ್ರಮಕ್ಕಾಗಿ ಮಾಹಿತಿ ನೀಡಿದ್ದರು. ಅದರಂತೆ ವಿಚಾರ ತಿಳಿದುಕೊಂಡ ಬಾಲಕಿಯ ತಾಯಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತೃತೇಜ್ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಒಟ್ಟು 30 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ವಿಚಾರಣೆ ನಡೆಸಿದ್ದು, ನೊಂದ ಬಾಲಕಿಯ ಸಾಕ್ಷಿ ಮತ್ತು ಡಿಎನ್‌ಎ ವರದಿಯಲ್ಲಿ ಆರೋಪಿಯು ನೊಂದ ಬಾಲಕಿಯ ಗರ್ಭಕ್ಕೆ ಕಾರಣವಾಗಿರುವ ಪೂರಕ ಸಾಕ್ಷಿ ಯನ್ನು ಪರಿಗಣಿಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅದರಂತೆ ಆರೋಪಿಗೆ 20ವರ್ಷ ಕಠಿಣ ಜೈಲುಶಿಕ್ಷೆ, 31ಸಾವಿರ ರೂ. ದಂಡ ವಿಧಿಸಲಾಗಿದ್ದು, ದಂಡದಲ್ಲಿ 11ಸಾವಿರ ರೂ. ಸರಕಾರಕ್ಕೆ ಮತ್ತು 20ಸಾವಿರ ರೂ. ಸಂತ್ರಸ್ತ ಬಾಲಕಿಗೆ ಮತ್ತು ಸರಕಾರದಿಂದ 2ಲಕ್ಷ ರೂ. ಪರಿಹಾರ ನೀಡಬೇಕೆಂದು ಎಂದು ನ್ಯಾಯಾಲಯ ಆದೇಶ ನೀಡಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಪ್ರಕರಣದ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಒಂದೇ ವರ್ಷದೊಳಗೆ ನ್ಯಾಯಾಲಯ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News