ಮಣಿಪಾಲ: ಜೂ.24ರಿಂದ ಮಾನ್ಸೂನ್ ಸ್ಕೂಲ್

Update: 2024-06-10 14:17 GMT

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬೆಂಗಳೂರು ಕ್ಯಾಂಪಸ್ ವತಿಯಿಂದ ಮಾನ್ಸೂನ್ ಸ್ಕೂಲ್‌ನ ಮೊದಲ ಆವೃತ್ತಿ ಜೂನ್ 24ರಿಂದ 29ರವರೆಗೆ ಆರು ದಿನಗಳ ಕಾಲ ಮಣಿಪಾಲದಲ್ಲಿ ನಡೆಯಲಿದೆ.

ಪರಿಸರ, ಹವಾಮಾನ ಬದಲಾವಣೆ, ಪ್ರಕೃತಿ-ಸಂಸ್ಕೃತಿ ಸಂಬಂಧ ಮತ್ತು ವಿನ್ಯಾಸ ಮುಂತಾದ ಬಹು ವಿಷಯಗಳ ಕುರಿತ ಸವಾಲುಗಳ ವಿಷಯ ಕೇಂದ್ರಿತವಾಗಿ ಈ ಮಾನ್ಸೂನ್ ಸ್ಕೂಲ್‌ನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಸೆಂಟರ್ ಫಾರ್ ದ್ವೀಪ ಮತ್ತು ಸೆಂಟರ್ ಫಾರ್ ಸದ್ಭಾವಗಳ ಸಹಭಾಗಿತ್ವದಲ್ಲಿ ಡಾ. ಟಿಎಂಎ ಪೈ ದತ್ತಿಪೀಠದ ಡಾ. ದೀಪ್ತಾ ಸತೀಶ್ ಸಂಯೋಜಿಸಲಿದ್ದಾರೆ.

ಬಹುವಿಷಯಗಳ ಪ್ರಯೋಗಾಲಯವಾಗಿರುವ ಈ ಕಾರ್ಯಕ್ರಮ ನೈರುತ್ಯ, ಪಶ್ಚಿಮ ಘಟ್ಟ ಪ್ರದೇಶ ಮತ್ತು ಕರಾವಳಿ ಕರ್ನಾಟಕಗಳ ನಡುವಿನ ಪರಿಸರ ಅಧ್ಯಯನದ ಮೇಲೆ ಕೇಂದ್ರೀಕೃತವಾಗಿರಲಿದೆ. ಈ ಭೂಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ವಿಶಿಷ್ಟ ನೈಸರ್ಗಿಕ ವೈವಿಧ್ಯತೆಯ ಮತ್ತು ಹವಾಮಾನದ ಪ್ರದೇಶವಾಗಿದೆ. ಇಂಥ ಪ್ರದೇಶ ಇದೀಗ ನಗರೀಕರಣ ಮತ್ತು ಅಸಹಜ ಅಭಿವೃದ್ಧಿಗೆ ತುತ್ತಾಗುತ್ತಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

ನೈರುತ್ಯ ಮಾರುತದಿಂದ ಮಳೆಯಾಗುವ ಈ ಪ್ರದೇಶ ಮುಂಗಾರುವಿನ ಅಧ್ಯಯನಕ್ಕೆ ಸೂಕ್ತ ಭೂಪ್ರದೇಶವಾಗಿದೆ. ಪರಿಸರ ತಜ್ಞರು, ವಾಸ್ತುಶಿಲ್ಪಿಗಳು, ನಗರ ವಿನ್ಯಾಸಕಾರರು, ಯೋಜನಾ ಕ್ಷೇತ್ರದಲ್ಲಿ ಕೆಲಸ ಮಾಡುವವರು, ತಂತ್ರಜ್ಞಾನಿಗಳು, ಪತ್ರಿಕೋದ್ಯಮಿಗಳು, ಪರಿಸರ ಕುತೂಹಲಿಗಳು, ಪರಿಸರ ಸಂರಕ್ಷಣೆಯ ಕಾಳಜಿಯುಳ್ಳವರು, ಕಲಾವಿದರು, ಕರಕುಶಲಕಾರರು, ವಿನ್ಯಾಸಕರು, ಭೂಗೋಳ ತಜ್ಞರು, ಪುರಾತತ್ವಶಾಸ್ತ್ರಜ್ಞರು, ಚಾರಣಿಗರು, ಮಾನವ ಶಾಸ್ತ್ರಜ್ಞರು, ಕಲಾವಿದರು, ಬರಹಗಾರರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಈ ಮಾನ್ಸೂನ್ ಸ್ಕೂಲ್‌ನಲ್ಲಿ ಭಾಗವಹಿಸ ಬಹುದಾಗಿದೆ.

ಇದರಲ್ಲಿ ಭಾಗವಹಿಸಲು ಯಾವುದೇ ನೋಂದಣಿ ಶುಲ್ಕವಿಲ್ಲ. ಆದರೆ, ಪಾಲ್ಗೊಳ್ಳುವವರು ಶಿಬಿರದ ಎಲ್ಲ ಆರುದಿನಗಳಲ್ಲಿ ಸಕ್ರಿಯವಾಗಿ ಭಾಗವಹಿಸ ಬೇಕಾಗುತ್ತದೆ. ಹೆಚ್ಚಿನ ವಿವರಕ್ಕೆ- dweepa.maheblr@manipal.edu- ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News