ವಿಧಾನ ಪರಿಷತ್ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್‌ಗೆ 3 ಸಾವಿರ ಮತ ಅಗತ್ಯ: ಮಂಜುನಾಥ್ ಭಂಡಾರಿ

Update: 2024-10-08 13:17 GMT

ಬೈಂದೂರು, ಅ.8: ವಿಧಾನಪರಿಷತ್ ಉಪಚುನಾವಣೆ ಸಂಬಂಧ ಅವಿಭಜಿತ ದ.ಕ ಜಿಲ್ಲೆಯಲ್ಲಿ ಒಟ್ಟು 6 ಸಾವಿರ ಮತದಾರರಿದ್ದು ಕಾಂಗ್ರೆಸ್ ಗೆಲ್ಲಲು 3 ಸಾವಿರ ಮತಗಳಾದರು ಬೇಕಿದೆ. ಬೈಂದೂರು ಕ್ಷೇತ್ರದಲ್ಲಿ ಒಟ್ಟು 570 ಗ್ರಾ.ಪಂ ಸದಸ್ಯರಿದ್ದು ಕಾಂಗ್ರೆಸ್ ಸಹಿತ ಇತರ ಮತಗಳನ್ನು ಪಡೆಯಲು ಕಠಿಬದ್ಧರಾಗಬೇಕು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ನಿಮಿತ್ತ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಸಮಿತಿಯಿಂದ ಮಂಗಳವಾರ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಮಂಗಳವಾರ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರ ಸಮಲೋಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ವಿಧಾನಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಬಲವರ್ಧನೆಗೊಳ್ಳಲು ಸಂಘಟಾನಾತ್ಮಕ ಪ್ರಯತ್ನ ಅಗತ್ಯವಿದೆ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು ಹಿಂದುಳಿದ ವರ್ಗದವರಿಗೆ ಸಿದ್ದರಾಮಯ್ಯ ನೇತೃತ್ವದ ಸರಕಾರ ನೀಡಿದ ಕೊಡುಗೆ ಸಹಿತ ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಆದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತವಾಗಿ ಪರಿವರ್ತಿ ಸುವ ಕೆಲಸ ಮಾಡುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಗಳಿಸಿಕೊಡುವಲ್ಲಿ ಶ್ರಮವಹಿಸಬೇಕು ಎಂದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿಲ್ಲ. ಹೀಗಾಗಿ ವಿಧಾನಪರಿಷತ್ ಚುನಾವಣೆಗೆ ಪಕ್ಷ ಆರಿಸಿದ ಅಭ್ಯರ್ಥಿ ಗೆದ್ದು ಬಂದಲ್ಲಿ ಜಿಲ್ಲೆಯ ಪ್ರಗತಿ ಹೆಚ್ಚಲಿದೆ. ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಆಯ್ಕೆ ಮಾಡಿದ ಅಭ್ಯರ್ಥಿಗೆ ಊರಿನ ಕೆಲಸ ಮಾಡುವ ಅರ್ಹತೆಯೂ ಇಲ್ಲ ಎಂದು ಹೇಳಿದರು.

ವಿಧಾನಪರಿಷತ್ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು. ಚುನಾವಣೆ ಉಸ್ತುವಾರಿ ಎಂ.ಎಸ್. ಮಹಮ್ಮದ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳ್ಳಹಳ್ಳಿ, ಪ್ರಕಾಶ್ಚಂದ್ರ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಮದನ್ ಕುಮಾರ್, ವಾಸುದೇವ ಯಡಿಯಾಳ, ಶರ್ಫುದ್ದೀನ್ ಶೇಖ್, ಜಯರಾಮ ನಾಯ್ಕ್, ದೇವಾನಂದ ಶೆಟ್ಟಿ, ಅನಂತ್ ಮೋವಾಡಿ, ಶಂಕರ ಪೂಜಾರಿ, ರಘುರಾಮ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ಸೂರ್ಯಕಾಂತಿ ಮೊದಲಾದ ವರು ಉಪಸ್ಥಿತರಿದರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿ, ಬೈಂದೂರು ಬ್ಲಾಕ್ ಅಧ್ಯಕ್ಷ ಅರವಿಂದ ಪೂಜಾರಿ ವಂದಿಸಿದರು. ಜಿಲ್ಲಾ ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News