ಮಣಿಪಾಲ: ಮಾಹೆಯ 32ನೇ ಘಟಿಕೋತ್ಸವ ಸಮಾಪ್ತಿ
ಉಡುಪಿ, ನ.10: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಮೂರು ದಿನಗಳ ಕಾಲ ನಡೆದ 32ನೇ ಘಟಿಕೋತ್ಸವ ರವಿವಾರ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಪದವಿ ಪ್ರದಾನದೊಂದಿಗೆ ಸಮಾಪ್ತಿ ಗೊಂಡಿತು.
ಮುಖ್ಯ ಅತಿಥಿಯಾಗಿ ಭಾರತ ಸರಕಾರ ಆರೋಗ್ಯ ಸಂಶೋಧನೆ ಇಲಾಖೆಯ ಕಾರ್ಯದರ್ಶಿ ಮತ್ತು ಭಾರತೀಯ ವೈದ್ಯ ಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ರಾಜೀವ್ ಭಾಲ್ ಮಾತನಾಡಿ, ವಿದ್ಯಾರ್ಥಿ ಮೊದಲು ತಮ್ಮ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಸ್ವಯಂ ಆರೈಕೆಯಿಲ್ಲದೆ, ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯ ವಿಲ್ಲ. ಯಶಸ್ಸು ಎಂಬುದು ಬದ್ಧತೆಯಿಂದ ಪ್ರಾರಂಭವಾಗುತ್ತವೆ. ಆತ್ಮವಿಶ್ವಾಸವು ಜೀವನದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದರು.
ನಿಮ್ಮ ಸಮಯ, ಶಕ್ತಿ ಮತ್ತು ಯೋಗಕ್ಷೇಮವು ಅಮೂಲ್ಯ ಆಸ್ತಿಗಳಾಗಿವೆ. ನೀವು ಕೌಶಲ್ಯಗಳನ್ನು ಬೆಳೆಸಲು ಅಥವಾ ನಿಮ್ಮ ವೃತ್ತಿಜೀವನವನ್ನು ಬೆಳೆಸಲು ಸಮಯ ತೆಗೆದುಕೊಳ್ಳಿ. ನಿಮ್ಮ ಮೌಲ್ಯವನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಮೌಲ್ಯಗಳನ್ನು ನಂಬಿರಿ ಮತ್ತು ನೀವು ಯಾವ ರೀತಿಯ ವ್ಯಕ್ತಿಯಾಗಲು ಬಯಸುತ್ತೀರಿ ಎಂಬುದನ್ನು ಪ್ರತಿಬಿಂಬಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಿ ಎಂದು ಅವರು ತಿಳಿಸಿದರು.
ಮಾಹೆ ಸಹ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ನಾವು ಶೈಕ್ಷಣಿಕ ಪ್ರತಿಭೆಯನ್ನು ಮಾತ್ರವಲ್ಲದೆ ಸಮಗ್ರತೆ, ಹೊಸತನ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ಪೋಷಿಸಲು ಬದ್ಧರಾಗಿದ್ದೇವೆ. ಉತ್ತಮ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯ ಮುಖ್ಯ. ಆತ್ಮವಿಶ್ವಾಸದಿಂದ ಮುಂದು ವರೆದು, ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.
ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್(ಡಾ) ಎಂ.ಡಿ.ವೆಂಕಟೇಶ, ಮಾಹೆ ರಿಜಿಸ್ಟ್ರಾರ್ ಗಿರಿಧರ್ ಪಿ.ಕಿಣಿ ಮಾತನಾಡಿ ದರು. ಮೂರು ದಿನಗಳ ಘಟಿಕೋತ್ಸವದಲ್ಲಿ 5767 ಎಂ.ಎ., ಎಚ್.ಇ. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾ ಯಿತು. ಸಾಧಕರಿಗೆ ಪ್ರತಿಷ್ಠಿತ ಡಾ.ಟಿ.ಎಂ.ಎ. ಪೈ ಚಿನ್ನದ ಪದಕವನ್ನು ನೀಡಲಾಯಿತು.
ಮಾಹೆ ಟ್ರಸ್ಟಿ ವಸಂತಿ ಆರ್.ಪೈ, ಉಪ ಕುಲಪತಿ ಡಾ.ನಾರಾಯಣ ಸಭಾಹಿತ್, ಡಾ ದಿಲೀಪ್ ಜಿ.ನಾಯಕ್, ಮೌಲ್ಯಮಾಪನ ರಿಜಿಸ್ಟ್ರಾರಂ ಡಾ ವಿನೋದ್ ವಿ.ಥಾಮಸ್ ಉಪಸ್ಥಿತರಿದ್ದರು. ಮಾಹೆ ಉಪಕುಲಪತಿ(ಆರೋಗ್ಯ ವಿಜ್ಞಾನ) ಡಾ.ಶರತ್ ಕೆ.ರಾವ್ ಸ್ವಾಗತಿಸಿದರು. ಮಾಹೆ ಸಹಾಯಕ ಪ್ರಾಧ್ಯಾಪಕಿ ಡಾ.ಅಂಕಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ಮಣಿಪಾಲದ ಪಿ.ಎಸ್.ಪಿ.ಎಚ್. ನಿರ್ದೇಶಕ ಡಾ.ಚೆರಿಯನ್ ವರ್ಗಿಸ್ ವಂದಿಸಿದರು.