ಉಡುಪಿ: ಗಾಳಿ-ಮಳೆಯಿಂದ ಒಂದೇ ದಿನದಲ್ಲಿ 40 ಲಕ್ಷ ರೂ.ಗಳಿಗೂ ಅಧಿಕ ಹಾನಿ

Update: 2024-07-26 14:38 GMT

ಉಡುಪಿ, ಜು.26: ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರೀ ಮಳೆ ಮುಂದುವರಿದಿರುವಂತೆ ಗಾಳಿ-ಮಳೆಯಿಂದ ಮನೆ ಸೇರಿದಂತೆ ವಿವಿಧ ಸೊತ್ತುಗಳಿಗೆ ಉಂಟಾಗುತ್ತಿರುವ ಹಾನಿಯ ಪ್ರಮಾಣವೂ ಹೆಚ್ಚುತ್ತಿದೆ. ಇಂದು ಒಂದೇ ದಿನದಲ್ಲಿ ನೂರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು 40 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ವರದಿ ಬಂದಿದೆ.

ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಕಚೇರಿಯಿಂದ ಬಂದಿರುವ ಮಾಹಿತಿಯಂತೆ ಇಂದು ಜಿಲ್ಲೆಯಾದ್ಯಂತ ಒಟ್ಟು 75ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾದ ವರದಿ ಇದ್ದು ಇದರಿದ ಸುಮಾರು 35 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಇನ್ನು ಕುಂದಾಪುರದಲ್ಲಿ ಏಳು ತೋಟಗಾರಿಕಾ ಬೆಳೆಗಳಿಗೆ ಹಾನಿಯಾದ ಪ್ರಕರಣ ವರದಿಯಾಗಿದ್ದು ಇದರಿಂದ ಸುಮಾರು ಮೂರು ಲಕ್ಷ ರೂ.ಗಳ ನಷ್ಟವಾಗಿದೆ. ಅದೇ ರೀತಿ ಜಾನುವಾರು ಕೊಟ್ಟಿಗೆಗೆ ಮಳೆ ಹಾಗೂ ಗಾಳಿಯಿಂದ ಹಾನಿಯಾದ 16 ಪ್ರಕರಣಗಳು ದಾಖಲಾಗಿದ್ದು ಎರಡೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಮಾಹಿತಿ ಲಭ್ಯವಾಗಿದೆ.

ಅತ್ಯಧಿಕ ಹಾನಿಯ ಪ್ರಕರಣಗಳು ವರದಿಯಾಗಿರುವುದು ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಿಂದ ಕುಂದಾಪುರದಲ್ಲಿ 31ರಷ್ಟು ಮನೆ ಹಾನಿ ಪ್ರಕರಣ ಇಂದು ದಾಖಲಾಗಿದ್ದು, ಇದರಿಂದ 10 ಲಕ್ಷ ರೂ., ಏಳು ತೋಟಗಾರಿಕಾ ಬೆಳೆ ನಾಶ ಪ್ರಕರಣದಿಂದ ಮೂರು ಲಕ್ಷ ರೂ. ಹಾಗೂ ಏಳು ಜಾನುವಾರು ಕೊಟ್ಟಿಗೆಗೆ ನಾಶ ಪ್ರಕರಣಗಳಲ್ಲಿ 75 ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಬೈಂದೂರು ತಾಲೂಕಿನಲ್ಲಿ 33 ಮನೆ ಹಾನಿ ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು 15 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅಲ್ಲದೇ ಬೈಂದೂರಿನಲ್ಲಿ ಎಂಟು ಕೊಟ್ಟಿಗೆ ಭಾಗಶ: ಅಥವಾ ಸಂಪೂರ್ಣ ಹಾನಿಯ ಪ್ರಕರಣಗಳಿದ್ದು ಸುಮಾರು ಎರಡು ಲಕ್ಷ ರೂ.ಗಳ ನಷ್ಟ ಸಂಭವಿಸಿರುವುದಾಗಿ ಹೇಳಲಾಗಿದೆ.

ಬೈಂದೂರು ನಾವುಂದದ ಶೇಖರ ಗಾಣಿಗ ಎಂಬವರ ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದ್ದು ಎರಡೂ ವರೆಗೆ ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಬಿಜೂರಿನ ಲಕ್ಷ್ಮೀ ಪೂಜಾರ್ತಿ, ಆನಂದ ಪೂಜಾರಿ, ಪಡುವರಿಯ ದುರ್ಗಿ, ಲಕ್ಷ್ಮೀ ಕಾಲ್ತೋಡಿನ ವಾಸು, ನಾರಾಯಣ, ಯಡ್ತರೆಯ ಮಂಜುನಾಥ, ಪಡವರಿಯ ಇಂದಿರಾ ಇವರ ಮನೆಗಳಿಗೆ ತಲಾ 50 ಸಾವಿರ ರೂ. ಕಿರಿಮಂಜೇಶ್ವರದ ಸುಕ್ರ ದೇವಾಡಿಗರ ಮನೆಗೆ ಒಂದು ಲಕ್ಷ ರೂ.ಗಳ ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ. ಕೊಲ್ಲೂರಿನ ಸುರೇಶ್ ಎಂಬವರ ಮನೆಗೆ ಮಳೆಯಿಂದ ಎರಡು ಲಕ್ಷ ರೂ. ನಷ್ಟು ನಷ್ಟವಾಗಿರುವ ಮಾಹಿತಿ ಬಂದಿದೆ.

ಕಾರ್ಕಳ ತಾಲೂಕು ಇನ್ನಾದ ಶಿವಾನಂದರ ಮನೆಗೆ ಹಾಗೂ ಕಾಪು ತಾಲೂಕು ಬಡಾ ಗ್ರಾಮದ ಕರುಣಾಕರ ದೇವಾಡಿಗರ ಮನೆಗೆ ತಲಾ ಎರಡು ಲಕ್ಷ ರೂ., ಉಡುಪಿ ತಾಲೂಕು ಶಿವಳ್ಳಿಯ ದಿನಕರ ದೇವಾಡಿಗರ ಮನೆಗೆ ಒಂದು ಲಕ್ಷ ರೂ., ಕೊಡವೂರಿನ ಸೋಮಯ್ಯರ ಮನೆಗೆ 60ಸಾವಿರ, ಕುಕ್ಕೆಹಳ್ಳಿಯ ಚಂದಯ್ಯರ ಮನೆ ಮೇಲೆ ಮರ ಬಿದ್ದು 50 ಸಾವಿರ ರೂ.ಗಳ ನಷ್ಟ ಸಂಭವಿಸಿದೆ.

ಇನ್ನು ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕೃಷ್ಣ ಕಾರಂತರ ಮನೆಗೆ 1.25ಲಕ್ಷ ರೂ., ಮುಕಾಂಬು ಮನೆಗೆ 80ಸಾವಿರ, ಗಿರಿಜಾ ಮನೆಗೆ 50 ಸಾವಿರ, ಕಾವ್ರಾಡಿಯ ಸುಮನಾ ಪ್ರಭು ಮನೆಗೆ ಒಂದು ಲಕ್ಷ ರೂ., ರವೀಂದ್ರ ಪೈ ಮನೆಗೆ 50ಸಾವಿರ, ಕಾವ್ರಾಡಿಯ ಬೀಬಿ ರೆಹನಾರ ಮನೆಗೆ 50 ಸಾವಿರ ಹಾಗೂ ಬಳ್ಕೂರು ಗ್ರಾಮದ ಲಚ್ಚ ಎಂಬವರ ಮನೆಗೆ 95ಸಾವಿರ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ.

54.9ಮಿ.ಮೀ. ಮಳೆ: ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 54.9ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 87ಮಿ.ಮೀ., ಬ್ರಹ್ಮಾವರದಲ್ಲಿ 62.7, ಕುಂದಾಪುರದಲ್ಲಿ 56.1, ಕಾರ್ಕಳದಲ್ಲಿ 50.7, ಬೈಂದೂರಿನಲ್ಲಿ 45.9, ಉಡುಪಿಯಲ್ಲಿ 45.7 ಹಾಗೂ ಕಾಪುವಲಿ 22.3ಮಿ.ಮೀ. ಮಳೆಯಾಗಿದೆ.

ಮುನ್ಸೂಚನೆ: ಜಿಲ್ಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ನ್ನು ಹವಾಮಾನ ಇಲಾಖೆ ನೀಡಿದೆ. ಜು. 27 ಹಾಗೂ 28ರಂದು ಗಂಟೆಗೆ 35-45ಕಿ.ಮೀ.ನಿಂದ 55ಕಿ.ಮೀ. ವೇಗದ ಗಾಳಿ ಬೀಸಲಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಎಚ್ಚರದ ತೆರೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದ್ದು, ಕಡಲ ಕಿನಾರೆಯಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಸೂಚಿಸಲಾಗಿದೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News