ಉಡುಪಿ ಜಿಲ್ಲಾಸ್ಪತ್ರೆ| 48.36 ಕೋಟಿ ರೂ. ಹೆಚ್ಚುವರಿ ಮೊತ್ತಕ್ಕೆ ಪ್ರಸ್ತಾವನೆ: ಸಚಿವ ದಿನೇಶ್ ಗುಂಡೂರಾವ್

Update: 2025-03-18 21:39 IST
ಉಡುಪಿ ಜಿಲ್ಲಾಸ್ಪತ್ರೆ| 48.36 ಕೋಟಿ ರೂ. ಹೆಚ್ಚುವರಿ ಮೊತ್ತಕ್ಕೆ ಪ್ರಸ್ತಾವನೆ: ಸಚಿವ ದಿನೇಶ್ ಗುಂಡೂರಾವ್
  • whatsapp icon

ಉಡುಪಿ, ಮಾ.18: ಉಡುಪಿ ಅಜ್ಜರಕಾಡಿನಲ್ಲಿ ನಿರ್ಮಾಣ ಹಂತದಲ್ಲಿ ರುವ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿಗೆ ಹೆಚ್ಚುವರಿಯಾಗಿ 48.36 ಕೋಟಿ ರೂ.ಅನುದಾನದ ಅವಶ್ಯಕತೆ ಇದ್ದು, ಇದಕ್ಕಾಗಿ ಸಲ್ಲಿಸಿದ ಪ್ರಸ್ತಾವನೆ ಸ್ವೀಕೃತಿಗೊಂಡ ನಂತರ ನಿಯಮಾನುಸಾರ ಪರಿಶೀಲಿಸಿ ಜಿಲ್ಲಾ ಆಸ್ಪತ್ರೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ನೂತನ ಜಿಲ್ಲಾಸ್ಪತ್ರೆಯ ಕಟ್ಟಡ ಕಾಮಗಾರಿ ಸ್ಥಗಿತ ಗೊಂಡಿರುವ ಬಗ್ಗೆ ರಾಜ್ಯ ವಿಧಾನ ಸಭೆಯಲ್ಲಿ ಇಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ನಿಯಮ-73ರಡಿಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ರೋಗಿಗಳಿಗೆ ಜಿಲ್ಲಾಸ್ಪತ್ರೆಯ ಸೇವೆ ಲಭ್ಯತೆ ವಿಳಂಬವಾಗುತಿದ್ದು, ಬಹಳ ತೊಂದರೆ ಯಾಗುತ್ತಿದೆ ಎಂದು ಶಾಸಕರು, ಸಚಿವರ ಗಮನ ಸೆಳೆದಿದ್ದರು.

ಉಡುಪಿ ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 115 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು 2020ರ ನವೆಂಬರ್ 13ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು ಎಂದು ದಿನೇಶ್ ಗುಂಡೂರಾವ್ ಉತ್ತರದಲ್ಲಿ ತಿಳಿಸಿದ್ದರು.

ಕಾಮಗಾರಿಯನ್ನು ಟೆಂಡರ್ ಆಹ್ವಾನಿಸಿ ಹೈದರಾಬಾದ್‌ನ ಮೆ.ಶ್ರೀ ಸಿದ್ದಾರ್ಥ ಇನ್ಫಾಟೆಕ್ ಆ್ಯಂಡ್ ಸರ್ವಿಸಸ್ ಪ್ರೈ.ಲಿ.ಗೆ ಟೆಂಡರ್‌ನ್ನು ಪ್ರೀಮಿಯಂ ಶೇ.12.50ಯೊಂದಿಗೆ ಗುತ್ತಿಗೆ ಮೊತ್ತ 110.25 ಕೋಟಿ ರೂ. ಹಾಗೂ ಶೇ.12 ಜಿಎಸ್‌ಟಿ (13.23ಕೋಟಿ) ಸೇರಿ ಒಟ್ಟು 123.47 ಕೋಟಿ ರೂ.ಗಳಿಗೆ 2021ರ ಸೆ.8ರಂದು ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿತ್ತು. ಈಗಾಗಲೇ ಶೇ.90ರಷ್ಟು ಕಾಮಗಾರಿ ಮುಗಿದಿದೆ ಎಂದು ಉತ್ತರದಲ್ಲಿ ಹೇಳಲಾಗಿದೆ.

ಮಂಜೂರಾದ ಅಂದಾಜು ಪಟ್ಟಿಯಲ್ಲಿ ಟೆಂಡರ್ ಪ್ರೀಮಿಯಂ ಹಾಗೂ ಬೆಲೆ ಏರಿಕೆಗಳಿಗೆ ಮೊತ್ತವನ್ನು ಇಡದೇ ಇರುವುದರಿಂದ ಶೇ.12.50 ಟೆಂಡರ್ ಪ್ರೀಮಿಯಂ (12.25 ಕೋಟಿ), ಬೆಲೆ ಏರಿಕೆ ಅಂಶದಿಂದ 17.53 ಕೋಟಿ ಹಾಗೂ ಶೇ.12ರಿಂದ 18 ಜಿಎಸ್‌ಟಿ ಹೆಚ್ಚಳ ರೂ.6.96 ಕೋಟಿ ರೂ. ಒಟ್ಟು ಸೇರಿ 36.74 ಕೋಟಿ ರೂ.ಹೆಚ್ಚಾಗುತ್ತಿದೆ. ಮೂಲ ವಿನ್ಯಾಸದಲ್ಲಿ ಮಾಡಿದ ಮಾರ್ಪಾಡಿನಿಂದ 1.26ಕೋಟಿ ರೂ., ಕಟ್ಟಡ ಪೂರ್ಣಗೊಳಿಸಿ ಹೆಚ್ಚುವರಿ ಕೆಲಸ ನಿರ್ವಹಣೆಗೆ 6.50 ಕೋಟಿ ರೂ.ಅಗತ್ಯವಿದ್ದು, ಒಟ್ಟಾರೆ ಕಾಮಗಾರಿ ಯನ್ನು ಪೂರ್ಣಗೊಳಿಸಲು ಪರಿಷ್ಕೃತ ಯೋಜನಾ ಮೊತ್ತ 159.50 ಕೋಟಿ ರೂ.ಗಳಾಗಿದೆ. ಇದರಿಂದ ಹೆಚ್ಚುವರಿಯಾಗಿ 44.50 ಕೋಟಿ ರೂ.ಅನುದಾನದ ಅಗತ್ಯವಿದೆ. ಇದು ಮೂಲ ಅಂದಾಜು ಮೊತ್ತಕ್ಕೆ ಹೋಲಿಸಿದಾಗ ಶೇ.38.70 ರಷ್ಟು ಅಧಿಕವಾಗಿದೆ ಎಂದು ಗುಂಡೂರಾವ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಯ ಪರಿಷ್ಕೃತ ಅಂದಾಜು ಪಟ್ಟಿ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಮುಂದೆ ಪರಿಶೀಲನೆಯಲ್ಲಿದ್ದು, ಸರಕಾರದಲ್ಲಿ ಪ್ರಸ್ತಾವನೆ ಸ್ವೀಕೃತಗೊಂಡ ನಂತರ ನಿಯಮಾನುಸಾರ ಜಿಲ್ಲಾಸ್ಪತ್ರೆಯ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್, ಶಾಸಕ ಯಶಪಾಲ್ ಸುವರ್ಣರಿಗೆ ನೀಡಿದ ಉತ್ತರದಲ್ಲಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News