"ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 1.2 ಕೋಟಿ ಕುಟುಂಬ ಬಡತನ ರೇಖೆ ಮೇಲಕ್ಕೆ"

Update: 2024-08-15 13:25 GMT

ಉಡುಪಿ, ಆ.15: ರಾಜ್ಯ ಸರಕಾರ ಕಳೆದ ವರ್ಷ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 7 ಕೋಟಿ ಜನತೆಗೆ ಅನುಕೂಲವಾಗಿದೆ. ಇದರಿಂದ ರಾಜ್ಯದ 1.2 ಕೋಟಿ ಕುಟುಂಬ ಬಡತನ ರೇಖೆಯಿಂದ ಮೇಲಕ್ಕೆ ಬಂದಿವೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದ್ದಾರೆ.

ನಗರದ ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದಲ್ಲಿ ನಡೆದ ದೇಶದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡುತಿದ್ದರು.

ಈ ಬಾರಿಯ ಬಜೆಟ್‌ನಲ್ಲಿ ಶೇ.15ರಷ್ಟು ಅನುದಾನ ಬಡವರಿಗೆ ಹಂಚಿಕೆಯಾಗಿದೆ. ಇದುವರೆಗೂ ಶೇ.4ರಿಂದ 5ರಷ್ಟು ಮಾತ್ರ ಅನುದಾನ ಬಡವರಿಗೆ ಹಂಚಿಕೆಯಾಗುತ್ತಿತ್ತು. ಇದರಿಂದ ಬಡವರ ಬದುಕು ಸುಧಾರಿಸುವು ದರಲ್ಲಿ ಯಾವುದೇ ಸಂದೇಹಗಳಿಲ್ಲ ಎಂದವರು ಸಮರ್ಥಿಸಿಕೊಂಡರು.

ಮಹಿಳೆಯರು ಹಣಕಾಸು ವಿಚಾರಗಳಲ್ಲಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಜಾರಿಗೊಳಿಸಿದ ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ. ರಾಜ್ಯದಲ್ಲಿ 1ಕೋಟಿ 20ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಈ ಯೋಜನೆ ತಲುಪಿದೆ. ಉಡುಪಿ ಜಿಲ್ಲೆಯಲ್ಲಿ 2.20 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಯೋಜನೆ ಲಾಭ ಪಡೆದಿದ್ದಾರೆ. ಯೋಜನೆಯ ಕೆಲವು ತಾಂತ್ರಿಕ ದೋಷಗಳಿಂದ ಜೂನ್ ಹಾಗೂ ಜುಲೈ ತಿಂಗಳ ಹಣ ಆಯಾ ಖಾತೆಗಳಿಗೆ ಜಮಾಗೊಳ್ಳುವಲ್ಲಿ ವಿಳಂಬವಾಗಿದೆ. ಕಳೆದ ಗುರುವಾರದಿಂದ ಯೋಜನೆಯ ಹಣ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದರು.

ಅತಿ ಕಡಿಮೆ ದರದಲ್ಲಿ ಊಟ-ತಿಂಡಿಗಳನ್ನು ನೀಡುವ ಇಂದಿರಾ ಕ್ಯಾಂಟಿನ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಅಲ್ಲಿ ಸಿಗುವ ಊಟ-ತಿಂಡಿಗಳಲ್ಲಿ ವೈವಿದ್ಯತೆ ತರುವ ಜೊತೆಗೆ ಹಿಂದೆ ಸ್ಥಾಪನೆ ಮಾಡಿದ್ದ 197 ಇಂದಿರಾ ಕ್ಯಾಂಟೀನ್‌ಗಳ ಜೊತೆಗೆ ಇನ್ನೂ ಹೊಸದಾಗಿ 118ನ್ನು ತೆರೆಯ ಲಾಗುತ್ತಿದೆ. ಪ್ರತಿ ನಿತ್ಯ ಒಬ್ಬ ವ್ಯಕ್ತಿಯ ಊಟ-ತಿಂಡಿಗೆ 63 ರೂ. ವೆಚ್ಚವಾಗುತಿದ್ದು, ಇದರಲ್ಲಿ 37ರೂ.ವನ್ನು ಸರಕಾರ ಭರಿಸುತ್ತಿದೆ. ಜನಪರ ಸರಕಾರ ಮಾತ್ರ ಇಂಥ ಯೋಚನೆ ಮಾಡಲು ಸಾಧ್ಯ ಎಂದು ಹೆಬ್ಬಾಳ್ಕರ್ ತಿಳಿಸಿದರು.

ಕಾನೂನು ಸುವ್ಯವಸ್ಥೆಗೆ ಕ್ರಮ: ಜಿಲ್ಲೆಯ ಕಾನೂನು ಹಾಗೂ ಸುವ್ಯವಸ್ಥೆಗೆ ಕ್ರಮಕೈಗೊಂಡಿದ್ದು, ಕಾಲಕಾಲಕ್ಕೆ ಸಭೆ ನಡೆಸಿ ವಿವಿಧ ಕ್ರಮಗಳನ್ನು ಕೈಗೊಂಡು ಅಪರಾಧಿ ಪ್ರಕರಣ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಅಪರಾಧಿಕ ಪ್ರಕರಣಗಳು ಕಡಿಮೆಯಾಗಿದೆ.

ದೇಶವು ಮೀನುಗಾರಿಕಾ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಇದಕ್ಕೆ ಜಿಲ್ಲೆಯ ಮೀನುಗಾರರ ಕೊಡು ಗೆಯೂ ಅಪಾರವಾಗಿದೆ. ಮಲ್ಪೆಯ ಸರ್ವಋತು ಮೀನುಗಾರಿಕಾ ಬಂದರನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಯುತಿದ್ದು, ಆರಂಭಿಕ ಹಂತವಾಗಿ ಸರ್ವೆ ಕಾರ್ಯ ನಡೆಯುತಿದೆ ಎಂದು ಸಚಿವೆ ತಿಳಿಸಿದರು.

ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು: ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಪ್ರಮುಖ ವಲಯವಾದ ಪ್ರವಾಸೋದ್ಯ ಮದ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲು ನಮ್ಮ ಸರಕಾರ ಹಲವು ಕ್ರಮ ಕೈಗೊಂಡಿದೆ. ಪ್ರವಾಸೋದ್ಯಮ ನೀತಿ 2024-289ರ ಮೂಲಕ ಪ್ರವಾಸೋದ್ಯಮ ವಲಯದಲ್ಲಿ ಹೂಡಿಕೆಗೆ ಅನುಕೂಲ ಕಲ್ಪಿಸಲು ವಿವಿಧ ಪ್ರೋತ್ಸಾಹಕ ಕ್ರಮ ಜಾರಿ ಮಾಡಲಾಗುತ್ತಿದೆ. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಜಿಲ್ಲೆಯ ಎಲ್ಲಾ ಗ್ರಾಪಂಗಳ 3402 ಗ್ರಾಮಗಳ ಜನವಸತಿ ಪ್ರದೇಶಗಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಜಲ ಜೀವನ್ ಮಿಷನ್ ಯೋಜನೆಯಡಿ 734.02 ಕೋಟಿ ರೂ.ಗಳಲ್ಲಿ 525 ಕಾಮಗಾರಿಗಳನ್ನು ಕೈಗೊಂಡು ಪ್ರಸ್ತುತ 437 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 32,418 ಮಂದಿಗೆ ವೃದ್ಧಾಪ್ಯ ವೇತನ, 34,912 ಮಹಿಳೆಯ ರಿಗೆ ವಿಧವಾ ವೇತನ, 13,465 ವಿಕಲಚೇತ ನರಿಗೆ ಅಂಗವಿಕಲರ ವೇತನ, 62,094 ಮಂದಿ ಸಂಧ್ಯಾಸುರಕ್ಷಾ ವೇತನ, 3965 ಮಂದಿಗೆ ಮನಸ್ವಿನಿ ಯೋಜನೆಯಡಿ ಹಾಗೂ 46 ಮಂದಿಗೆ ಮೈತ್ರಿ ಯೋಜನೆಯಡಿ ಒಟ್ಟಾರೆ 1,46,900 ಮಂದಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ನೀಡಲಾಗುತ್ತಿದೆ ಎಂದ ಅವರು ಜಿಲ್ಲೆಯ 2028 ನಿರುದ್ಯೋಗಿ ಯುವಜನತೆ ಯುವನಿಧಿಯ ಲಾಭ ಪಡೆಯುತ್ತಿದ್ದರೆ, ಜಿಲ್ಲೆಯ 1.39 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ ಎಂದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಪಂ ಸಿಇಒ ಪ್ರತೀಕ್ ಬಾಯಲ್, ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್.ಎನ್, ಅಪರ ಜಿಲ್ಲಾಧಿಕಾರಿ ಮಮತಾದೇವಿ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಕ್ರೀಡಾಧಿಕಾರಿ ಡಾ.ರೋಶನ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ತಿಂಗಳಿಂದ ಗೃಹ ಆರೋಗ್ಯ ಯೋಜನೆ

ಜನರ ಮನೆಯ ಬಾಗಿಲಿನಲ್ಲೇ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ಒದಗಿಸುವ ಗೃಹ ಆರೋಗ್ಯ ಯೋಜನೆಯನ್ನು ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಜಾರಿ ಮಾಡಲಾಗುತಿದ್ದೆ ಎಂದು ತಿಳಿಸಿದ ಸಚಿವೆ ಲಕ್ಷ್ಮೀ, ಈ ಯೋಜನೆಯಡಿ ಮಧು ಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೂ ಮೂರು ತಿಂಗಳಿಗಾಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ನೇರವಾಗಿ ತಲುಪಿಸಲಾಗುತ್ತದೆ ಎಂದರು.

ತಮ್ಮ ಸರಕಾರ ದುಡಿಯುವ ಯಾವುದೇ ವರ್ಗದ ಜನರನ್ನೂ ಮರೆತಿಲ್ಲ ಎಂದು ಹೇಳಿದ ಅವರು, ಎಲ್ಲಾ ವರ್ಗದವರಿಗೂ ಒಂದಲ್ಲ ಒಂದು ಕೊಡುಗೆಯನ್ನು ನೀಡಿದ್ದೇವೆ ಎಂಬುದಕ್ಕೆ ಗಿಗ್ ಕೆಲಸಗಾರರಿಗೆ 2 ಲಕ್ಷ ರೂ. ವರೆಗೆ ಆರೋಗ್ಯ ವಿಮೆ ಜಾರಿಗೆ ತಂದಿರುವುದೇ ಸಾಕ್ಷಿ. ಅದೇ ರೀತಿ ಚಳಿ, ಗಾಳಿ, ಮಳೆ ಎನ್ನದೇ ಪ್ರತಿದಿನ ಮುಂಜಾನೆ ಮನೆಮನೆಗೆ ಪತ್ರಿಕೆ ತಲುಪಿಸುವ ವರಿಗೂ ಆರೋಗ್ಯ ವಿಮೆ ಜಾರಿಗೆ ತಂದಿದ್ದೇವೆ ಎಂದರು.

ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ಕ್ರಮ

ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿ (ಎನ್‌ಇಪಿ) ಸಾಕಷ್ಟು ಗೊಂದಲಗಳಿಗೆ ಕಾರಣವಾಗಿತ್ತು. ನೆಲ ಸಂಸ್ಕೃತಿಯಿಂದ ದೂರವಿದ್ದು ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರೊಂದಿಗೆ ರಾಜ್ಯದ್ದೇ ಆದ ಪ್ರತ್ಯೇಕ ಕರ್ನಾಟಕ ಶಿಕ್ಷಣ ನೀತಿ ತರಲು ಸಮಿತಿ ರಚಿಸಲಾಗಿದೆ. ಈ ಸಮಿತಿಯ ಮದ್ಯಂತರ ವರದಿಯಂತೆ ಈಗಾಗಲೇ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದರು.

ಬಹುಧರ್ಮ, ಬಹುಸಂಸ್ಕೃತಿ, ಬಹುಭಾಷೆ ಇರುವ ದೇಶಕ್ಕೆ ಏಕ ಸಂಸ್ಕೃತಿ ಯಾವತ್ತೂ ಹೊಂದುವುದಿಲ್ಲ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ವಾಸ್ತವಾಂಶ ಗಳನ್ನು ಒಳಗೊಂಡ ಶಿಕ್ಷಣ ನೀತಿಯ ಅಗತ್ಯತೆ ಇದೇ. ಇದೇ ಪ್ರಯತ್ನವನ್ನು ನಮ್ಮ ಸರಕಾರ ಮಾಡಲು ಹೊರಟಿದೆ ಎಂದರು.









Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News