ಜೂ.15-16: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಿಸಲು ಬೆಂಗಳೂರಿನಲ್ಲಿ ‘ದಕ್ಷಿಣ ಭಾರತ ಉತ್ಸವ-2024’

Update: 2024-05-29 16:27 GMT

ಉಡುಪಿ, ಮೇ 29: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಹಾಗೂ ಉದ್ಯೋಗ ಸೃಷ್ಟಿಗೆ ಪ್ರಾಮುಖ್ಯತೆ ನೀಡಲು ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ), ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಜೂನ್ 15 ಮತ್ತು 16ರಂದು ಬೆಂಗಳೂರಿನ ಅರಮನೆ ಮೈದಾನದ ಪ್ರಿನ್ಸೆಸ್‌ ಶ್ರೈನ್ ಗೇಟ್ ನಂ.9ರಲ್ಲಿ ‘ದಕ್ಷಿಣ ಭಾರತ ಉತ್ಸವ-2024’ನ್ನು ಆಯೋಜಿಸಿದೆ ಎಂದು ಎಫ್‌ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಎಂ.ಜಿ.ಬಾಲಕೃಷ್ಣ ತಿಳಿಸಿದ್ದಾರೆ.

ಉಡುಪಿಯ ಮಣಿಪಾಲ ಇನ್ ಹೊಟೇಲ್ ಸಭಾಂಗಣದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಈ ಕಾರ್ಯಕ್ರಮದ ಮೂಲಕ ಹೂಡಿಕೆದಾರರನ್ನು ಆಕರ್ಷಿಸಿ, ದಕ್ಷಿಣ ಭಾರತದ ಉಳಿದ ರಾಜ್ಯಗಳ ಪ್ರವಾಸೋದ್ಯಮ ಅಭಿವೃದ್ಧಿ ಮಟ್ಟಕ್ಕೆ ಸರಿಸಮಾನವಾಗಿ ನಿಲ್ಲುವುದು ನಮ್ಮ ಗುರಿಯಾಗಿದೆ ಎಂದವರು ಹೇಳಿದರು.

ಬಹುನಿರೀಕ್ಷಿತ ಈ ಉತ್ಸವವನ್ನು ಜೂ.15ರಂದು ಬೆಳಗ್ಗೆ 11ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸು ವರು ಎಂದ ಬಾಲಕೃಷ್ಣ, ಈ ಸಂಬಂಧ ಇಂದು ಇಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ‘ಉಡುಪಿ ರೋಡ್ ಶೋ’ವನ್ನು ಕರೆಯ ಲಾಗಿದೆ ಎಂದು ವಿವರಿಸಿದರು.

ಈಗಾಗಲೇ ಸಾಕಷ್ಟು ಮಂದಿ ದಕ್ಷಿಣ ಭಾರತ ಉತ್ಸವ-2024ರ ಬಗ್ಗೆ ಆಸಕ್ತಿಯನ್ನು ತೋರಿಸುತಿದ್ದಾರೆ. ಇದುವರೆಗೆ ಸುಮಾರು 500 ಕೋಟಿ ರೂ.ಗಳವರೆಗೆ ಹೂಡಿಕೆಯ ಪ್ರಸ್ತಾಪವನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ ಸುಮಾರು 30 ಕೋಟಿ ರೂ.ಗಳನ್ನು ಕರಾವಳಿಯ ಬೀಚ್ ಟೂರಿಸಂ ಮೇಲೆ ಹೂಡಿಕೆ ಮಾಡಲು ಸಂಸ್ಥೆ ಮುಂದೆ ಬಂದಿದೆ ಎಂದರು.

ಒಟ್ಟಾರೆಯಾಗಿ ಎರಡು ದಿನಗಳ ಸಮಾವೇಶದಲ್ಲಿ ಸುಮಾರು 1000 ಕೋಟಿ ರೂ.ಗಳ ಬಂಡವಾಳ ಹರಿದು ಬರುವ ನಿರೀಕ್ಷೆ ನಮಗಿದೆ. ಸಮಾವೇಶದಲ್ಲಿ ವಿವಿಧ ವರ್ಗಗಳ ಸುಮಾರು 70ರಿಂದ 100ರಷ್ಟು ಸ್ಟಾಲ್‌ಗಳನ್ನು ತೆರೆಯುವ ಸಾಧ್ಯತೆ ಇದೆ ಎಂದು ಬಾಲಕೃಷ್ಣ ತಿಳಿಸಿದರು.

ಪ್ರವಾಸೋದ್ಯಮ ಉದ್ಯಮದೊಳಗೆ ಕ್ರಿಯಾಶೀಲ ಪಾಲುದಾರರನ್ನು ತೊಡಗಿಸಿಕೊಳ್ಳಲು ಮತ್ತು ಅವರಿಗೆ ಎಲ್ಲಾ ಸೌಲಭ್ಯ ಗಳನ್ನು ಸರಕಾರದ ಮೂಲಕ ಒದಗಿಸಲು ಉತ್ಸವವನ್ನು ವಿನ್ಯಾಸಗೊಳಿಸಲಾಗಿದೆ. ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ರುವ ವಿಪುಲ ಅವಕಾಶ, ಇಲ್ಲಿನ ಶ್ರೀಮಂತ ಸಂಸ್ಕೃತಿ, ಪ್ರವಾಸೋದ್ಯಮ ತಾಣಗಳ ಮಾಹಿತಿ ಅವುಗಳ ವೈವಿಧ್ಯತೆ, ಅವುಗಳಿರುವ ಅವಕಾಶಗಳನ್ನು ಸಹ ವಿಷದವಾಗಿ ತಿಳಿಸಲು ವ್ಯವಸ್ಥೆಯಾಗಿದೆ ಎಂದು ಅವರು ವಿವರಿಸಿದರು.

ಉಡುಪಿಯಲ್ಲಿ ಬೀಚ್ ಪ್ರವಾಸೋದ್ಯಮ, ಇಕೋ ಪ್ರವಾಸೋದ್ಯಮ, ಟೆಂಪಲ್ ಹಾಗೂ ಇತರ ಪ್ರವಾಸೋದ್ಯಮಗಳ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಭಾಗಿದಾರರು, ಕೈಗಾರಿಕೋದ್ಯಮಿಗಳು ಹಾಗೂ ಪ್ರವಾಸೋದ್ಯಮ ವೃತ್ತಿ ನಿರತರು ಇದರಲ್ಲಿ ಭಾಗವಹಿಸಬಹುದು. ಅಲ್ಲಿ ರಾಜ್ಯದ ಮೂರು ಕರಾವಳಿ ಜಿಲ್ಲೆಗಳಿಗೆ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಕೇರಳ ಹಾಗೂ ಗೋವಾ ಪ್ರವಾಸೋದ್ಯಮಕ್ಕೆ ಕಡಿಮೆ ಇಲ್ಲದಂತೆ ಇಲ್ಲೂ ಅಭಿವೃದ್ಧಿ ಸಾಧಿಸಲು ಸಾದ್ಯವಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕರಾವಳಿ ಪ್ರವಾಸೋದ್ಯಮ ಸಂಘಟನೆಗಳ ಅಧ್ಯಕ್ಷ ಮನೋಹರ ಎಸ್.ಶೆಟ್ಟಿ ಮಾತ ನಾಡಿ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಯೋಜಿತ ಅಭಿವೃದ್ಧಿಯಿಂದ ಉದ್ಯೋಗಾವ ಕಾಶಗಳನ್ನು ವ್ಯಾಪಕವಾಗಿ ಸೃಷ್ಟಿಸಲು ಸಾಧ್ಯವಿದೆ. ಇದಕ್ಕಾಗಿ ರಾಜ್ಯ ಸರಕಾರ ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಪ್ರತ್ಯೇಕವಾಗಿ ಒಬ್ಬ ಐಎಎಸ್ ದರ್ಜೆಯ ಅಧಿಕಾರಿಯನ್ನು ಇಲಾಖೆಗೆ ನಿಯೋಜಿಸಿ ಯೋಜನೆ ರೂಪಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಫ್‌ಕೆಸಿಸಿಐನ ನಿರ್ದೇಶಕ ಪಿ.ಸಿ.ರಾವ್, ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ನಿರ್ದೇಶಕ ಅಂಡಾರು ದೇವಿಪ್ರಸಾದ ಶೆಟ್ಟಿ, ನಾಗರಾಜ ಹೆಬ್ಬಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News