ಡಿ.3ರಂದು 19ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕಾರ್ಕಳ : 19ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಮ್ಮೇಳನಾಧ್ಯಕ್ಷ ಸೂಡ ಸದಾನಂದ ಶೆಣೈ ಅವರ ಅಧ್ಯಕ್ಷತೆಯಲ್ಲಿ ಡಿ.3ರಂದು ನಡೆಯಲಿದೆ ಎಂದು ತಾಲೂಕು ಕ.ಸಾ.ಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು.
ಅವರು ಕಾರ್ಕಳದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧ್ವಜಾರೋಹಣವನ್ನು ಅಜೆಕಾರ್ ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ನೆರವೇರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷೆ ಉಷಾ ಕೆ, ಜ್ಞಾನಸುಧಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ. ಕೊಡವೂರು, ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ ಉಪಸ್ಥಿತರಿದ್ದಾರೆ. ಬೆಳಗ್ಗೆ 9.30ಕ್ಕೆ ಶ್ರೀ ದುರ್ಗಾ ಹಿ ಪ್ರಾ. ಶಾಲೆಯಿಂದ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಲಾಗುತ್ತದೆ. ಹಾಗೂ ಕನ್ನಡ ಮಾತೆ ಶ್ರೀ ಭುವನೇಶ್ವರಿ ದೇವಿಯ ಶೋಭಾಯಾತ್ರೆ ನಡೆಯಲಿದೆ.
ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಮ್ಮೇಳನದ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಹಿರಿಯ ಉದ್ಯಮಿ ಬೋಳ ಪ್ರಭಾಕರ ಕಾಮತ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ವಿ. ಸುನಿಲ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಸೂಡ ಸದಾನಂದ ಶೆಣೈ ಸಮ್ಮೇಳನಾಧ್ಯಕ್ಷತೆ ಸ್ಥಾನ ವಹಿಸಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ| ಯು.ಬಿ.ರಾಜಲಕ್ಷ್ಮೀ, ಲೇಖಕಿ ಅವನೀ ಉಪಾಧ್ಯಾಯಯವರ ರಾಮಾಯಣ ಸಿರಿ ಪುಸ್ತಕವನ್ನು ಡಾ| ಸುಧಾಕರ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಹಲವು ಮಂದಿ ಗಣ್ಯರು ಉಪಸ್ಥಿತರಿರಲಿದ್ದಾರೆ. ಬಳಿಕ ವಿವಿಧ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಸಂಜೆ ಸಮಾರೋಪ ನಡೆಯಲಿದ್ದು, ನಿವೃತ್ತ ಕನ್ನಡ ಉಪನ್ಯಾಸಕ ಎಸ್. ರಾಮ ಭಟ್ ಸಮಾರೋಪ ಭಾಷಣ ನೆರವೇರಿಸಲಿದ್ದಾರೆ.
ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಹರ್ಷಿಣಿ, ಬಾಬು ಕೆ. ಇನ್ನಾ, ರವೀಂದ್ರ ಕುಮಾರ್, ವೆಲೇರಿಯನ್ ಲೋಬೋ ಸಾಣೂರು, ಬಾಲಕೃಷ್ಣ ಭೀಮಗುಳಿ, ಮೋಹನ ಶ್ರೀರಮಣ ಆಚಾರ್, ಜನಾರ್ದನ ಆಚಾರ್ಯ, ವಸಂತ ಮೂಲ್ಯ, ಮೊಹಮ್ಮದ್ ಗೌಸ್ ಹಾಗೂ ಛತ್ರಪತಿ ಫೌಂಡೇಶನ್ ಕಾರ್ಕಳ ಮತ್ತು ಹೊಸಬೆಳಕು ಕಣಜಾರು ಈ ಸಂಸ್ಥೆಗಳನ್ನು ಸಮ್ಮಾನಿಸಲಾಗುತ್ತದೆ. ಉದ್ಯಮಿ ಎಸ್‍ಕೆಎಫ್ ಮೂಡುಬಿದಿರೆ ಸಂಸ್ಥಾಪಕ ಡಾ. ರಾಮಕೃಷ್ಣ ಆಚಾರ್ ಸಾಧಕರನ್ನು ಸಮ್ಮಾನಿಸಲಿದ್ದಾರೆ ಹಾಗೂ ವಿವಿಧ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ಅರುಣ್ ರಾವ್ ಮುಂಡ್ಕೂರು, ಕಾರ್ಯದರ್ಶಿ ಸುಧಾಕರ ಪೊಸ್ರಾಲು, ಶಿವ ಸುಬ್ರಹ್ಮಣ್ಯ, ಲಕ್ಷ್ಮೀ ಹೆಗ್ಡೆ ಉಪಸ್ಥಿತರಿದ್ದರು.