7 ತಿಂಗಳಿಂದ ಬಾರದ ಪ್ರೋತ್ಸಾಹ ಧನ: ತಕ್ಷಣ ಬಿಡುಗಡೆಗೆ ಆಗ್ರಹ

Update: 2024-05-16 13:34 GMT

ಉಡುಪಿ, ಮೇ 16: ಉಡುಪಿ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳು, ರೈತರು ಮತ್ತು ಸಿಬ್ಬಂದಿ ಎದುರಿ ಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಸಮಾಲೋಚನ ಸಭೆಯು ಉಡುಪಿ ಜಿಲ್ಲಾ ಹೈನುಗಾರರ ಪರಿವಾರ ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಅಜ್ಜರಕಾಡು ಪುರಭವನದ ಮಿನಿಹಾಲ್‌ನಲ್ಲಿ ಗುರುವಾರ ನಡೆಯಿತು.

ಕಳೆದ 7 ತಿಂಗಳಿಂದ ಬಾರದ ಸರಕಾರದ ಪ್ರೋತ್ಸಾಹ ಧನವಾದ 5ರೂ.ವನ್ನು ತಕ್ಷಣದಲ್ಲಿ ಬಿಡುಗಡೆಗಾಗಿ ಸರಕಾರವನ್ನು ಒತ್ತಾಯಿಸಬೇಕು. ಹಾಲು ಉತ್ಪಾದಕರ ಒಕ್ಕೂಟದಿಂದ ಸಂಘಕ್ಕೆ ನೀಡುತ್ತಿರುವ ಲಾಭಾಂಶ ಕನಿಷ್ಠ 50ಪೈಸೆಗೆ ಏರಿಸ ಬೇಕು. ರೈತರು ಪೂರೈಸುವ ಹಾಲಿನಲ್ಲಿ ಲೀಟರೊಂದರ 5 ಪೈಸೆಯನ್ನು ರೈತ ಕಲ್ಯಾಣ ಟ್ರಸ್ಟ್‌ಗೂ 5 ಪೈಸೆಯನ್ನು ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ಗೂ ಪಾವತಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಅದೇ ರೀತಿ ಹಾಲಿನ ಉತ್ಪಾದನೆ ಕ್ಷೀಣಿಸುವುದರಿಂದ ಪ್ರಕೃತ ಅಭಿವೃಧಿ ನಿಧಿಗಾಗಿ ಕಟಾಯಿಸುತ್ತಿರುವ ಲೀಟರೊಂದರ 15 ಪೈಸೆಯನ್ನು ತಡೆಹಿಡಿದು ಹಾಲಿನ ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕು. ಹೊರಜಿಲ್ಲೆಗೆ ಅನಧಿಕೃತವಾಗಿ ಸಾಗಾಟ ಮಾಡುವ ಜಾನುವಾರುಗಳಿಗೆ ಕಡಿವಾಣ ಹಾಕಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಏಕರೂಪ ತಂತ್ರಾಂಶದ ಸಾಧಕ-ಬಾದಕಗಳ ಚರ್ಚೆಯಾಗಿ ತರಬೇತಿ ನೀಡದೆ ಒತ್ತಾಯ ಪೂರ್ವಕವಾಗಿ ಅಳವಡಿಸು ವುದನ್ನು ನಿಲ್ಲಿಸಬೇಕು. ಗುಣಮಟ್ಟದ ಸೈಲೇಜ್ (ರಸಮೇವು) ಪೂರೈಸಬೇಕು. ರೈತರು, ಸಿಬ್ಬಂದಿಗಳಿಗೆ ಗುಂಪು ಆರೋಗ್ಯ ವಿಮೆ ನೀಡಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ವಿಶೇಷ ವಲಯ ಎಂದು ಪರಿಗಣಿಸಿ ಈ ಹಿಂದೆ ಸರಕಾರ ಹಾಲು ಮತ್ತು ಕೆಎಂಎಫ್‌ನ ಇತರ ಉತ್ಪನ್ನಗಳಿಗೆ 2 ರೂ. ಮಾರಾಟ ದರವನ್ನು ಹೆಚ್ಚಿಸಿತ್ತು. ನಮ್ಮ ಜಿಲ್ಲೆಯಲ್ಲಿ ಹೈನುಗಾರಿಕೆ ಕ್ಷೀಣಿಸುತ್ತಿರುವ ಈ ಸಂದರ್ದಲ್ಲಿ ಮಾರಾಟ ದರವನ್ನು 2 ರೂ. ಹೆಚ್ಚಿಸಿ ಅದರ ಮೌಲ್ಯವನ್ನು ಹೈನುಗಾರರಿಗೆ ವರ್ಗಾಹಿಸಿದಲ್ಲಿ ಗ್ರಾಹಕರಿಗೆ ಹೊರೆಯಾಗದೆ ರೈತರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಸಾಸ್ತಾನ ಜಗದೀಶ ಕಾರಂತ ಮಾತನಾಡಿದರು. ವಿವಿಧ ಸಂಘಗಳ ಅಧ್ಯಕ್ಷರಾದ ಗೋಪಾಲಕೃಷ್ಣ ಹೆಗ್ಡೆ ಕೆಮ್ಮಣ್ಣು, ಶ್ರೀಪತಿ ಅಧಿಕಾರಿ ಬಾಳಕುದ್ರು, ಪ್ರಮುಖರಾದ ಭಾಸ್ಕರ್ ಶೆಟ್ಟಿ ಅಮ್ಮುಂಜೆ, ಬೆನೆಡಿಕ್ಟ್ ನೊರೋನ್ಹಾ, ಓಂ ಪ್ರಕಾಶ್ ಮಾತನಾಡಿದರು.

ಒಕ್ಕೂಟದ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ ಮಂದಾರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಬ್ಲಾಡಿ ಮಂಜಯ್ಯ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

‘ಅಧಿಕಾರಿಗಳು ಕುಳಿತು ಕಾನೂನು ಮಾಡುತ್ತಾರೆ. ಮುಂದೆ ಅದನ್ನು ನಮ್ಮ ಮೇಲೆ ಹೇರುತ್ತಾರೆ. ಅವರಿಗೆ ಏನು ಗೊತ್ತು ನಮ್ಮ ಕಷ್ಟ. ಎರಡು ದಿನ ನಮ್ಮ ಮನೆಗೆ ಬಂದು ಕುಳಿತುಕೊಳ್ಳಲಿ. ಅವರಿಗೆ ಆಗ ಗೊತ್ತಾಗುತ್ತದೆ ನಮ್ಮ ಕಷ್ಟ ಏನು ಎಂಬುದು. ಬೇಕಾದರೆ ಅವರಿಗೆ ದಿನಕ್ಕೆ ಒಂದು ಸಾವಿರ ರೂ. ಸಂಬಂಳ ನೀಡುತ್ತೇನೆ’

-ಗೋಪಾಲಕೃಷ್ಣ ಹೆಗ್ಡೆ, ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ, ಕೆಮ್ಮಣ್ಣು,

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News