ಶೀಘ್ರದಲ್ಲೇ ಕಾಣಿಸಲಿದೆ ಅಪರೂಪದ ಧೂಮಕೇತು ‘ಅಟ್ಲಾಸ್’: ಖಗೋಳ ಶಾಸ್ತ್ರಜ್ಞ, ವಿಜ್ಞಾನಿ ಡಾ.ಎ.ಪಿ. ಭಟ್

Update: 2024-09-17 16:24 GMT

ಉಡುಪಿ, ಸೆ.17: ಅಪರೂಪದ ಧೂಮಕೇತು ಅಟ್ಲಾಸ್ ಇದೀಗ ಸೆಪ್ಟಂಬರ್- ಅಕ್ಟೋಬರ್ ತಿಂಗಳಲ್ಲಿ ಮತ್ತೆ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಉಡುಪಿಯ ಖಗೋಳ ಶಾಸ್ತ್ರಜ್ಞ, ವಿಜ್ಞಾನಿ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.

2023ರ ಜನವರಿ ತಿಂಗಳಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿ.ಮೀ. ದೂರದಲ್ಲಿ ಇದನ್ನು ಮೊದಲು ನೋಡಿ ಶತಮಾನದ ಧೂಮಕೇತು ಎಂದು ಬಣ್ಣಿಸಲಾಗಿತ್ತು. ಆದರೆ ಈಗ ಅದನ್ನು ವರ್ಷದ ಧೂಮಕೇತು ಎಂದು ಅಂದಾಜಿಸ ಲಾಗಿದೆ. ಈ ಧೂಮಕೇತುವಿನ ಹೆಸರು ಸುಚಿನ್ಸನ್-ಅಟ್ಲಾಸ್(ಕಾಮೆಟ್ ಸಿ/2023 ಎ3 ಸುಚಿನ್ಸನ್ ಅಟ್ಲಾಸ್). ಇದು ಸಪ್ಟಂಬರ್ ತಿಂಗಳ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಕಣ್ಣಿಗೆ ಕಾಣಲಿದೆ ಎನ್ನಲಾಗುತ್ತಿದೆ.

ಸೌರ ವ್ಯೆಹದ ಹೊರವಲಯ ಊರ್ಸ್ ಕ್ಲೌಡ್‌ನಿಂದ (ಸುಮಾರು 3 ಜ್ಯೋತಿರ್ವರ್ಷ=30 ಟ್ರಿಲಿಯನ್ ಕಿಮೀ) ದೂರದಿಂದ ಹೊರಟ ಈ ಧೂಮಕೇತು, ಸೆಕೆಂಡಿಗೆ ಸುಮಾರು 80 ಕಿ.ಮೀ. ವೇಗದಲ್ಲಿ ಕ್ರಮಿಸುತ್ತಾ ಸಪ್ಟಂಬರ್ 27ರಂದು ಸೂರ್ಯ ನನ್ನು ಸಮೀಪಿಸಲಿದೆ. ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು ಸೂರ್ಯ ನಿಂದ ಹಿಂದಿರುಗುವಾಗ ಅಕ್ಟೋಬರ್ ಸಂಜೆಯಲ್ಲಿ ಪಶ್ಚಿಮ ಆಕಾಶದಲ್ಲಿ ಬರಿಕಣ್ಣಿಗೆ ಕಾಣಿಸಿಕೊಳ್ಳಲಿದೆ. ಇದು ಅಕ್ಟೋಬರ್ 12ರಂದು ಭೂಮಿಗೆ ಸಮೀಪಿಸಲಿದೆ.

2023ರ ಜನವರಿಯಲ್ಲಿ ಪ್ರಥಮ ಬಾರಿಗೆ ದೂರದರ್ಶಕದಲ್ಲಿ ನೋಡಿ 2024ರ ಸಪ್ಟಂಬರ್-ಅಕ್ಟೋಬರ್‌ಗೆ ಇದೊಂದು ಶತಮಾನದ ಧೂಮಕೇತು ವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ವರ್ಷದ ಫೆಬ್ರವರಿ ಸುಮಾರಿಗೆ ಇದು ಕಾಣೆಯಾದಾಗ ಧೂಮಕೇತು ಸಿಡಿದು ಹೋಯಿತು ಎನ್ನಲಾಯ್ತು. ಈಗ ಇದರ ತುಂಡೋ ಅಥವಾ ಮೂಲ ಧೂಮ ಕೇತುವೂ ಅಂತೂ ದೂರದರ್ಶಕಕ್ಕೆ ಪುನಃ ಗೋಚರಿಸಿದಾದ ಬರಿಗಣ್ಣಿಗೆ ಕಾಣುವ ವರ್ಷದ ಧೂಮಕೇತುವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಡಾ.ಎ.ಪಿ.ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಧೂಮಕೇತುಗಳೇ ಹೀಗೆ , ಅಲೆಮಾರಿಗಳು. ಇವುಗಳ ಚಲನವಲನ ಹೀಗೆ ಎನ್ನುವಂತಿಲ್ಲ. ಇದು ಶತಮಾನದ ಧೂಮ ಕೇತುವಾಗಬಹುದೇ? ವರ್ಷದ ಧೂಮಕೇತುವೇ? ಅಥವಾ ಬರಿಗಣ್ಣಿಗೆ ಕಾಣಿಸುವುದೇ-ಇಲ್ಲವೇ ? ಈ ಎಲ್ಲಾ ಪ್ರಶ್ನೆಗಳಿಗೆ ಕೆಲ ದಿನಗಳಲ್ಲಿ ಉತ್ತರ ಸಿಗಲಿದೆ. ಶತಮಾನದ ಧೂಮಕೇತು ‘ಕಾಮೆಟ್ ಆಫ್ ದಿ ಸೆಂಚುರಿ’ ಅಂದರೆ ಅದು ಕೆಲ ತಿಂಗಳು ಆಕಾಶದಲ್ಲಿ ಬರೆಕಣ್ಣಿಗೆ ಕಂಡು ವಿಜೃಂಭಿಸುವ ಧೂಮಕೇತು. ವರ್ಷದ ಧೂಮಕೇತು ವೆಂದರೆ ಬರೆಕಣ್ಣಿಗೆ ಕಾಣ ಸಿಗುವ ಧೂಮಕೇತು.

ಈ ಹಿಂದೆ ಬಂದು ಬರಿಗಣ್ಣಿಗೆ ಕಂಡ ಧೂಮಕೇತುಗಳನ್ನು ಗ್ರೇಟ್ ಕಾಮೆಟ್ ಎಂದು ಹೆಸರಿಸಿದ್ದಾರೆ. 1996ರ ಹಯಾಕುಟಿಕೆ, 1997ರ ಹೇಲ್ ಬೂಪ್, 2003ರ ನೀಟ್, 2007ರ ಮಕ್ನಾಟ್, 2011ರ ಲವ್ಜಾಯ್, ಹಾಗೂ 2020ರ ನಿಯೋವೈಸ್‌ಗಳು.

ಈಗ ಬರುತ್ತಿರುವ ಧೂಮಕೇತು ಬರಿಗಣ್ಣಿಗೆ ಕಂಡು, ಇವುಗಳ ಸಾಲಿಗೆ ಸೇರಲಿದೆಯೇ ಕಾದು ನೋಡಬೇಕಿದೆ. ಅಟ್ಲಾಸ್ ಧೂಮಕೇತು ಈತಿಂಗಳ ಬೆಳಗಿನ ಜಾವ ಹಾಗೂ ಬರುವ ತಿಂಗಳಿನ ಸಂಜೆ, ಸೂರ್ಯನ ಸಮೀಪ ಬಂದು ಹೋಗುವಾಗ ಬೃಹತ್ ಬಾಲಬೀಸಿ ವಿಸ್ಮಯ ತೋರಬಹುದು ಎಂದು ಡಾ.ಎ.ಪಿ.ಭಟ್ ಆಶಾವಾದ ವ್ಯಕ್ತಪಡಿಸಿದ್ದಾರೆ.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News