ಉಡುಪಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ: 3 ವರ್ಷಗಳಲ್ಲಿ 1184 ಪ್ರಕರಣ; 3.78 ಕೋಟಿ ರೂ. ದಂಡ ವಸೂಲಿ

Update: 2024-02-20 13:23 GMT

ಉಡುಪಿ: ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅಕ್ರಮ ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಲ್ಲಿ ಒಟ್ಟು 1184 ಪ್ರಕರಣಗಳಲ್ಲಿ ಬರೋಬ್ಬರಿ 3,78,74,555ರೂ. ದಂಡ ವಸೂಲಿ ಮಾಡಿದ್ದು, ಈ ಮೂಲಕ ಅಕ್ರಮ ದಂಧೆಕೋರರಿಗೆ ದಂಡದ ಬಿಸಿ ಮುಟ್ಟಿಸಲಾಗಿದೆ.

ಸಾರ್ವಜನಿಕ ದೂರು ಮತ್ತು ವಿಶೇಷ ಕಾರ್ಯಾಚರಣೆ ಮೂಲಕ ಗಣಿ ಇಲಾಖೆ ಅಧಿಕಾರಿಗಳು ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಸಹಿತ ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ ವಿವಿಧ ಕಡೆಗಳಿಗೆ ದಾಳಿ ನಡೆಸಿ ಈ ಕ್ರಮ ತೆಗೆದುಕೊಂಡಿದೆ.

ಕಟ್ಟಡ ಕಲ್ಲು, ಸಾಮಾನ್ಯ ಮರಳು, ಕಪ್ಪೆ ಚಿಪ್ಪು, ಲ್ಯಾಟರೈಟ್, ಆಲಂಕಾರಿಕ ಶಿಲೆ, ಸಿಲಿಕಾ ಮರಳು, ಜೇಡಿ ಮಣ್ಣು ಮತ್ತು ಎಂ-ಸ್ಯಾಂಡ್ ಸಾಗಾಟ ಹಾಗೂ ಗಣಿಗಾರಿಕೆಗೆ ಸಂಬಂಧಿಸಿ ಕಾನೂನು ಬಾಹಿರವಾಗಿ ನಡೆದಿರುವ ಘಟನೆಗಳಲ್ಲಿ ಪ್ರತ್ಯೇಕ ವಾಗಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.

3 ವರ್ಷಗಳ ಪ್ರಕರಣಗಳು-ದಂಡ

2021-22ನೇ ಸಾಲಿನ ಅಕ್ರಮ ಗಣಿಗಾರಿಕೆ(165 ಪ್ರಕರಣಗಳು, 84,25,676ರೂ. ದಂಡ) ಖನಿಜ ಸಾಗಾಣಿಕೆ(26 ಪ್ರಕರಣಗಳು, 2,38,264 ರೂ. ದಂಡ), ದಾಸ್ತಾನು (232 ಪ್ರಕರಣಗಳು, 6,856415ರೂ. ದಂಡ)ಗೆ ಸಂಬಂಧಿಸಿ ಒಟ್ಟು 423 ಪ್ರಕರಣಗಳಲ್ಲಿ 1,55,20,355 ರೂ. ದಂಡ ವಸೂಲಿ ಮಾಡಲಾಗಿದೆ.

2022-23ರಲ್ಲಿ ಅಕ್ರಮ ಗಣಿಗಾರಿಕೆ(205 ಪ್ರಕರಣಗಳು, 7588044ರೂ. ದಂಡ) ಖನಿಜ ಸಾಗಾಣಿಕೆ (8 ಪ್ರಕರಣಗಳು, 238420ರೂ. ದಂಡ), ದಾಸ್ತಾನು (266 ಪ್ರಕರಣಗಳು, 6480490ರೂ. ದಂಡ)ಗೆ ಸಂಬಂಧಿಸಿ 479 ಪ್ರಕರಣಗಳಲ್ಲಿ 1,43,06,954ರೂ. ದಂಡ ವಸೂಲಿ ಮಾಡಲಾಗಿದೆ.

2023-24ರಲ್ಲಿ 10 ತಿಂಗಳಲ್ಲಿ (ಡಿಸೆಂಬರ್‌ವರೆಗೆ) ಅಕ್ರಮ ಗಣಿಗಾರಿಕೆ(87 ಪ್ರಕರಣಗಳು, 3229196ರೂ. ದಂಡ) ಖನಿಜ ಸಾಗಾಣಿಕೆ(14 ಪ್ರಕರಣಗಳು, 315940ರೂ. ದಂಡ), ದಾಸ್ತಾನು(181 ಪ್ರಕರಣಗಳು, 4502110ರೂ. ದಂಡ)ಗೆ ಸಂಬಂಧಿಸಿ 282 ಪ್ರಕರಣಗಳಲ್ಲಿ 80,47,246 ರೂ. ದಂಡ ವಸೂಲಿ ಮಾಡಲಾಗಿದೆ.

2021ರಿಂದ ಈವರೆಗೆ ಒಟ್ಟು ಮೂರು ವರ್ಷಗಳಲ್ಲಿ ಇಲಾಖೆ ಅಂಕಿಅಂಶ ಪ್ರಕಾರ ಮರಳುಗಾರಿಕೆ ದೂರುಗಳೇ ಹೆಚ್ಚು. 2021-22ನೇ ಸಾಲಿನಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 263 ಪ್ರಕರಣಗಳು, 2022-23ನೇ ಸಾಲಿನಲ್ಲಿ 340 ಪ್ರಕರಣಗಳು, 151 ಪ್ರಕರಣಗಳು ಸೇರಿದಂತೆ ಒಟ್ಟು 754 ಪ್ರಕರಣಗಳನ್ನು ದಾಖಲಿಸಿ, ಒಟ್ಟು 18,058,396ರೂ. ದಂಡ ಸಂಗ್ರಹಿಸಲಾಗಿದೆ.

24 ಗಂಟೆ ಕಂಟ್ರೋಲ್ ರೂಂ

ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಗಣಿ ಇಲಾಖೆ ಕಂಟ್ರೋಲ್ ರೂಂ ಸ್ಥಾಪಿಸ ಲಾಗಿದ್ದು, ದಿನದ 24 ಗಂಟೆಗಳ ಕಾಲವೂ ಕಂಟ್ರೋಲ್‌ರೂಂಗೆ ಬರುವ ದೂರು ಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾ ಗಿದೆ. ಇದರಲ್ಲಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಂಟ್ರೋಲ್ ರೂಮ್‌ಗೆ ಬರುವ ಸಾರ್ವಜನಿಕ ದೂರುಗಳನ್ನು ಸ್ವೀಕರಿಸಿ, ನೋಂದಾಯಿಸಲಾಗುತ್ತದೆ. ಬಳಿಕ ಸಂಬಂಧ ಪಟ್ಟ ತಾಲೂಕಿನ ಗಣಿ ಇಲಾಖೆ ಅಧಿಕಾರಿಗಳು, ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಸಹಿತ ಸಂಬಂಧಪಟ್ಟ ಇಲಾಖೆ ಗಳಿಗೆ ಮಾಹಿತಿ ನೀಡಲಾಗುತ್ತದೆ. ಕಂಟ್ರೋಲ್‌ರೂಂನಲ್ಲಿ ಬೃಹತ್ ಟಿವಿ ಸ್ಕ್ರೀನ್ ಅಳವಡಿಸಲಾಗಿದ್ದು, ಜಿಪಿಎಸ್ ವ್ಯವಸ್ಥೆ ಯಡಿ ಗಣಿ ಸಾಗಾಟ ವಾಹನಗಳ ಮೇಲೆ ನಿಗಾ ಇರಿಸಲಾಗುತ್ತದೆ ಎನ್ನುತ್ತಾರೆ ಹಿರಿಯ ಭೂ ವಿಜ್ಞಾನಿ ಸಂದೀಪ್ ಜಿ.ಯು.

2021ರಿಂದ 2024ರ ವರೆಗೆ ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದ ಒಟ್ಟು 669 ದೂರುಗಳ ಪೈಕಿ 663 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಅನಧಿಕೃತ ಮರಳುಗಾರಿಕೆ ಸಂಬಂಧಿಸಿ ಕುಂದಾಪುರ ಭಾಗದಿಂದ ಹೆಚ್ಚು ದೂರು ಬಂದಿದ್ದು, ಕಾಪು, ಉಡುಪಿ, ಕಾರ್ಕಳ ಭಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಬೈಂದೂರು, ಕುಂದಾಪುರ, ಬ್ರಹ್ಮಾವರ ಭಾಗದಲ್ಲಿ ಅನಧಿಕೃತ ಮಣ್ಣು ಗಣಿಗಾರಿಕೆ ಸಂಬಂಧಿಸಿ ದೂರುಗಳು ದಾಖಲಾಗಿವೆ.

ಕುಂದಾಪುರ ತಾಲೂಕಿನ 261 ದೂರುಗಳಲ್ಲಿ 261, ಬೈಂದೂರು ತಾಲೂಕಿನ 106 ದೂರುಗಳ ಪೈಕಿ 106, ಬ್ರಹ್ಮಾವರ ತಾಲೂಕಿನ 117ದೂರುಗಳಲ್ಲಿ 115, ಉಡುಪಿ ತಾಲೂಕಿನ 56 ದೂರುಗಳಲ್ಲಿ 56, ಕಾರ್ಕಳ ತಾಲೂಕಿನ 40 ದೂರುಗಳ ಪೈಕಿ 37, ಕಾಪು ತಾಲೂಕಿನ 72 ದೂರುಗಳಲ್ಲಿ 71 ಮತ್ತು ಹೆಬ್ರಿ ತಾಲೂಕಿನ 17ದೂರುಗಳ ಪೈಕಿ 17ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಗಣಿ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಅನಧಿಕೃತ ಗಣಿಗಾರಿಕೆ, ಸಾಗಾಟ, ದಾಸ್ತಾನು ವಿರುದ್ಧ ನಿರಂತರ ಕಾರ್ಯಾ ಚರಣೆ ನಡೆಸಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ ಅನಧಿಕೃತ ಕಲ್ಲು, ಮರಳು ಗಣಿಗಾರಿಕೆ ಸಂಬಂಧಿಸಿ ಸಾರ್ವಜನಿಕ ದೂರು ಮತ್ತು ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಳೆದ 10 ತಿಂಗಳಲ್ಲಿ 80 ಲಕ್ಷ ರೂ. ಅಧಿಕ ದಂಡ ಸಂಗ್ರಹಿಸಲಾಗಿದೆ. ಈಗಾಗಲೆ ಒನ್‌ಸ್ಟೇಟ್ ಒನ್ ಜಿಪಿಎಸ್ ನಿಯಮಾವಳಿಯಲ್ಲಿ ಜಿಲ್ಲೆಯಲ್ಲಿ 1826 (ಲಾರಿ, ಟೆಂಪೋ) ಖನಿಜ ಸಾಗಾಟ ವಾಹನಗಳು ಜಿಪಿಎಸ್ ಅಳವಡಿಸಿಕೊಂಡಿವೆ’

-ಸಂದೀಪ್ ಜಿ.ಯು., ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News