ನೂತನ ಜಿಲ್ಲಾ ಸರಕಾರಿ ವಕೀಲರಿಗೆ ಪ್ರಭಾರ ಹಸ್ತಾಂತರಿಸದ ಸಂತೋಷ್ ಹೆಬ್ಬಾರ್ ವಿರುದ್ಧ ಕ್ರಮ: ಉಡುಪಿ ವಕೀಲರ ಸಂಘ ಆಗ್ರಹ

Update: 2023-11-01 15:10 GMT

ಉಡುಪಿ : ಉಡುಪಿ ಜಿಲ್ಲಾ ಸರಕಾರಿ ವಕೀಲರಾಗಿದ್ದ ಸಂತೋಷ ಹೆಬ್ಬಾರ್ ಅವರನ್ನು ಸರಕಾರದ ಅಧಿಸೂಚನೆಯಂತೆ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದರೂ, ನೂತನವಾಗಿ ನೇಮಕಗೊಂಡ ಜಿಲ್ಲಾ ಸರಕಾರಿ ವಕೀಲರಿಗೆ ಪ್ರಭಾರ ಹಸ್ತಾಂತರಿಸದ ಹಾಗೂ ಅವರು ಎಸಗಿರುವ ಇತರ ಕರ್ತವ್ಯಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್‌ಕುಮಾರ್ ಕರ್ನಾಟಕ ಸರಕಾರದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿಯಾಗಿ ಆಗ್ರಹಿಸಿದ್ದಾರೆ.

ಸಂತೋಷ್ ಹೆಬ್ಬಾರ್ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಅವರಿಗೆ ಒಂದು ತಿಂಗಳ ನೋಟೀಸಿನ ಬದಲು ಒಂದು ತಿಂಗಳ ರಿಟೈನರ್ ಫೀ ಮಂಜೂರು ಮಾಡಿ ಅ.7ರಂದು ಸರಕಾರಿ ಅಧಿಸೂಚನೆ ಹೊರಡಿಸ ಲಾಗಿತ್ತು. ಹಾಗೂ ಅವರ ಸ್ಥಾನಕ್ಕೆ ಮೇರಿ ಎ.ಆರ್.ಶ್ರೇಷ್ಠ ಇವರನ್ನು ನೂತನ ಜಿಲ್ಲಾ ಸರಕಾರಿ ವಕೀಲರನ್ನಾಗಿ ನೇಮಿಸಲಾಗಿತ್ತು ಎಂದು ಅವರು ರೇನೊಲ್ಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೂ ಕೆಲವೊಂದು ದುರುದ್ದೇಶಗಳನ್ನು ಹೊಂದಿರುವ ಸಂತೋಷ್ ಹೆಬ್ಬಾರ್ ಇದುವರೆಗೂ ನೂತನ ಜಿಲ್ಲಾ ಸರಕಾರಿ ವಕೀಲರಿಗೆ ಪ್ರಭಾರವನ್ನು ಹಸ್ತಾಂತರಿಸದೇ, ಜಿಲ್ಲಾ ಸರಕಾರಿ ವಕೀಲರ ಹುದ್ದೆಯಲ್ಲಿ ಕಾನೂನು ಬಾಹಿರವಾಗಿ ಮುಂದುವರಿ ಯುತಿದ್ದು, ಉಡುಪಿಯ ನ್ಯಾಯಾಲಯಗಳಲ್ಲಿ ಸರಕಾರವನ್ನು ಕಾನೂನುಬಾಹಿರವಾಗಿ ಪ್ರತಿನಿಧಿಸುತಿದ್ದಾರೆ ಎಂದವರು ದೂರಿದ್ದಾರೆ.

ಅಲ್ಲದೇ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಸರಕಾರಿ ವಕೀಲರು ಹಾಗೂ ಅಪರ ಸರಕಾರಿ ವಕೀಲರ ಕಚೇರಿಗೆ ಅಕ್ರಮವಾಗಿ ಬೀಗ ಜಡಿದು ಅಪರ ಸರಕಾರಿ ವಕೀಲರ ಕಾರ್ಯನಿರ್ವಹಣೆಗೂ ಅಡ್ಡಿಯನ್ನುಂಟು ಮಾಡುತಿದ್ದಾರೆ ಎಂದು ತಿಳಿಸಿದ್ದಾರೆ.

ಸಂತೋಷ್ ಹೆಬ್ಬಾರ್ ಜಿಲ್ಲಾ ಸರಕಾರಿ ವಕೀಲರಾಗಿದ್ದ ಅವಧಿಯಲಿ ತನ್ನ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸಿರಲಿಲ್ಲ ಹಾಗೂ ಸರಕಾರವನ್ನು ವಸ್ತುನಿಷ್ಠ ಹಾಗೂ ಕ್ರಮಬದ್ಧವಾಗಿ ಪ್ರತಿಪಾದಿಸಿರಲಿಲ್ಲ. ಅಲ್ಲದೇ ಸರಕಾರದ ಹಿತಾಸಕ್ತಿಗಳನ್ನು ಸಮರ್ಪಕ ರೀತಿಯಲ್ಲಿ ರಕ್ಷಿಸಿರಲಿಲ್ಲ ಎಂದೂ ರೇನೊಲ್ಡ್ ಹೇಳಿರಕೆಯಲ್ಲಿ ಆರೋಪಿಸಿದ್ದಾರೆ.

ಆದುದರಿಂದ ಹೆಬ್ಬಾರ್ ತನ್ನ ಅಧಿಕಾರಾವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಪ್ರಕರಣಗಳ ಕಡತಗಳಿಗೆ ಸಂಬಂಧಪಟ್ಟು ಸಮಗ್ರ ತನಿಖೆ ನಡೆಸಿ ಅದರಲ್ಲಿ ಅವರು ಎಸಗಿರುವ ಲೋಪಗಳಿಂದ ಸರಕಾರಕ್ಕಾಗಿರುವ ನಷ್ಟವನ್ನು ಸಂತೋಷ್ ಹೆಬ್ಬಾರ್‌ ರಿಂದಲೇ ವಸೂಲಿ ಮಾಡಲು ಕ್ರಮಕೈಗೊಳ್ಳಬೇಕು. ಹಾಗೂ ನೂತನ ಜಿಲ್ಲಾ ಸರಕಾರಿ ವಕೀಲರಿಗೆ ಪ್ರಭಾರ ಹಸ್ತಾಂತರಿಸದೇ ಕರ್ತವ್ಯಲೋಪ ಎಸಗಿರುವುದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು, ಅದುವರಿಗೆ ಸರಕಾರದಿಂದ ಬರುವ ಎಲ್ಲಾ ಮೊತ್ತವನ್ನು ತಡೆಹಿಡಿಯಬೇಕೆಂದು ರೇನೊಲ್ಡ್ ಪ್ರವೀಣ್‌ಕುಮಾರ್ ಸರಕಾರವನ್ನು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News