ಯಕ್ಷಗಾನ ವೇಷಧರಿಸಿ ಭಿಕ್ಷಾಟನೆಯನ್ನು ನಿಷೇಧಿಸಿ: ಅಶೋಕ ಶೆಟ್ಟಿ
ಉಡುಪಿ: ಯಕ್ಷಗಾನದ ವೇಷಭೂಷಣಗಳನ್ನು ಧರಿಸಿಕೊಂಡು ರಸ್ತೆಯಲ್ಲಿ ಭಿಕ್ಷಾಟನೆ, ಮದ್ಯಪಾನ, ಧೂಮಪಾನ ಸೇವನೆ, ಅಸಹ್ಯಕರವಾಗಿ ಕುಣಿಯುವುದನ್ನು ತಕ್ಷಣವೇ ನಿಷೇಧಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ತಾವು ನಿಯೋಗದೊಂದಿಗೆ ತೆರಳಿ ಮನವಿ ಮಾಡಿದ್ದಾಗಿ ದ.ಕ.ಜಿಲ್ಲಾ ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಜನಸಾಮಾನ್ಯರ ಕಲೆಯಾದ ಯಕ್ಷಗಾನಕ್ಕೆ ಈ ಮೂಲಕ ಆಗುತ್ತಿರುವ ಅಪಚಾರ ತಕ್ಷಣ ನಿಲ್ಲಬೇಕಾಗಿದೆ ಎಂದ ಅವರು ಯಕ್ಷಗಾನಕ್ಕೆ ತನ್ನದೇ ಆದ ಹಿರಿಮೆ, ಗರಿಮೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಿನ್ನೆಲೆಯಿದೆ. ಇದನ್ನು ಗೌರವಿಸಬೇಕಾಗಿದೆ ಎಂದರು.
ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದೇವೆ. ಯಕ್ಷಗಾನದ ಮಹತ್ವವನ್ನು ಅರಿಯದೇ ಕಂಡಕಂಡ ವರೆಲ್ಲಾ ಮುಖಕ್ಕೆ ಬಣ್ಣ ಬಳಿದು, ವೇಷ ಕಟ್ಟಿಕೊಂಡು ಬೀದಿಗಳಲ್ಲಿ ಅಸಹ್ಯಕರವಾಗಿ ಕುಣಿಯುವುದು ಸರಿಯಲ್ಲ. ವೇಷ ಭೂಷಣ ಧರಿಸಿ ಭಿಕ್ಷಾಟನೆ ಮಾಡುವ ಮೂಲಕ ಯಕ್ಷಗಾನ ಕಲೆಗೆ ಅಪಚಾರ ಮಾಡುತ್ತಿರುವ ಈ ದಂಧೆಯನ್ನು ನಿಲ್ಲಿಸು ವಂತೆ ಎಸ್ಪಿಯವರಲ್ಲಿ ಮನವಿ ಮಾಡಿದ್ದೇವೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರೂ ಆಗಿರುವ ಅಶೋಕ ಸರಪಾಡಿ ತಿಳಿಸಿದರು.
ಕಲಾವಿದರೇ ಯಕ್ಷಗಾನ ವೇಷ ಧರಿಸಬೇಕು. ರಂಗಸ್ಥಳದಲ್ಲಿ ಕುಣಿಯಬೇಕು.ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಕಲೆಗೆ ಅಪಚಾರವಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ತಾವು ಯಕ್ಷಗಾನ ಅಕಾಡೆಮಿಯೂ ದೂರು ನೀಡಿರುವುದಾಗಿ ಸರಪಾಡಿ ತಿಳಿಸಿದರು.
ಹಿಂದೂ ಧಾರ್ಮಿಕ ಹಬ್ಬಗಳಾದ ಶ್ರೀಕೃಷ್ಣಾಷ್ಟಮಿ, ಚೌತಿಹಬ್ಬ, ನವರಾತ್ರಿ ಸಂದರ್ಭಗಳಲ್ಲಿ ಯಕ್ಷಗಾನದ ಗೆಜ್ಜೆಕಟ್ಟಿ, ಮುಖಕ್ಕೆ ಬಣ್ಣ ಬಳಿದು ಯಕ್ಷಗಾನ ವೇಷಭೂಷಣ ಧರಿಸಿ ಬೀದಿ ಬೀದಿ ಅಲೆದಾಡಿ ಭಿಕ್ಷೆ ಬೇಡುವುದನ್ನು ನಿಷೇಧಿಸಬೇಕಾಗಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠದ ಮುಖಂಡರಾದ ಸುರೇಂದ್ರ ಪಣಿಯೂರು, ಪ್ರಕಾಶ್ ಕಾಮತ್, ರಾಜಶೇಖರ ಉಡುಪಿ ಹಾಗೂ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.