ಬಸ್ರೂರು: ಪತ್ನಿಯನ್ನು ಕಡಿದು ಕೊಲೆಗೆ ಯತ್ನ; ಕತ್ತಿ ಹಿಡಿದು ನಿಂತಿದ್ದ ಆರೋಪಿಯನ್ನು ಸಾಹಸಿಕವಾಗಿ ಬಂಧಿಸಿದ ಪೊಲೀಸರು

Update: 2024-08-04 06:47 GMT

ಕುಂದಾಪುರ: ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಸಾಹಸಕರ ರೀತಿಯಲ್ಲಿ ಬಂಧಿಸಿದ ಘಟನೆ ಬಸ್ರೂರಿನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಕ್ಷ್ಮಣ (38) ಬಂಧಿತ ಆರೋಪಿ. ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಬಳಿಕ ಮನೆಯ ಒಳಗಿನಿಂದ ಬಾಗಿಲು ಭದ್ರಪಡಿಸಿದ್ದ ಆರೋಪಿಯು ಯಾರೂ ಒಳಗೆ ಬಾರದಂತೆ ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಕತ್ತಿ ಹಿಡಿದು ಹೆದರಿಸಿದ್ದ.

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬಂದಿ ಭಾರೀ ಶ್ರಮಪಟ್ಟು, ಕೋಣೆಯ ಕಿಟಿಕಿಯನ್ನು ಮುರಿದು ಒಳಗೆ ಪ್ರವೇಶಿಸಿ ಗಾಯಗೊಂಡಿದ್ದ ಅನಿತಾ (32) ಅವರನ್ನು ರಕ್ಷಿಸಿ ಕುಂದಾಪುರದ ಆಸ್ಪತ್ರೆಗೆ ಸೇರಿಸಿದ್ದಾರೆ.  

ಪ್ರಕರಣದ ವಿವರ

ಈ ದಂಪತಿ ಸಾಗರ ಮೂಲದವರಾಗಿದ್ದು, ಬಸ್ರೂರಿನ ವೃದ್ಧಾಶ್ರಮವೊಂದರ ತೋಟದಲ್ಲಿ ಕೆಲಸಕ್ಕೆಂದು ಬಂದಿದ್ದರು. ಅಲ್ಲಿನ ಕ್ವಾಟ್ರಸ್‌ ನ ಒಂದು ರೂಮಿನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಯಾವುದೋ ವಿಷಯಕ್ಕೆ ಸಂಬಂಧಿಸಿ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಗಲಾಟೆ ನಡೆದಿದ್ದು, ಅದು ವಿಕೋಪಕ್ಕೆ ಹೋಗಿ ಲಕ್ಷ್ಮಣನು ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದ.

ಕುಂದಾಪುರ (ಕಂಡ್ಲೂರು) ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿ ಶಾಮಕ ಸಿಬಂದಿ ಸ್ಥಳೀಯರ ಸಹಾಯದೊಂದಿಗೆ ಮಹಿಳೆಯನ್ನು ರಕ್ಷಿಸಿದರು. ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ, ಕಂಡ್ಲೂರು ಪಿಎಸ್‌ಐ ಭೀಮಾಶಂಕರ್ ಭೇಟಿ ನೀಡಿದ್ದರು.

ಪತ್ನಿಯ ಕೊಲೆಗೆ ಯತ್ನಿಸಿದ ಆರೋಪಿಯನ್ನು ಹಿಡಿಯಲು ಪೊಲೀಸರು ಹರಸಾಹಸ ಪಡುವಂತಾಯಿತು. ಕೈಯಲ್ಲಿ ಕತ್ತಿ ಹಿಡಿದು ಹೆದರಿಸುತ್ತಿದ್ದುದರಿಂದ ಎದುರಿನ ಬಾಗಿಲು ಮುರಿದು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಪೊಲೀಸರು ಆತನಿದ್ದ ರೂಮಿನ ಕಿಟಕಿ ಮೂಲಕ ಖಾರದ ಪುಡಿ ಎರಚಿದ್ದು, ಅದರಿಂದ ಆತ ತಪ್ಪಿಸಿಕೊಂಡ. ಬಳಿಕ ಏರ್‌ ಗನ್‌ ಮೂಲಕ ಗ್ಯಾಸ್‌ ಸಿಂಪಡಿಸಿದ್ದು, ಅದರಿಂದಲೂ ತಪ್ಪಿಸಿಕೊಂಡಿದ್ದಾನೆ. ಕೊನೆಗೆ ಎದುರಿನ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿರುವಂತೆ ಮಾಡಿ, ಮತ್ತೂಂದು ತಂಡ ಕಿಟಕಿ ಮೂಲಕ ಒಳಗೆ ಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿ ಬಳಿಕ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News