ಕುಂದಾಪುರ: ಬಿಎಸ್ಎನ್ಎಲ್ ಟವರ್ ಕಟ್ಟಡದೊಳಗಿದ್ದ ಬ್ಯಾಟರಿ ಕಳವು ಪ್ರಕರಣ; ಮೂವರ ಬಂಧನ

Update: 2023-11-29 10:17 GMT

ಕುಂದಾಪುರ: ತಾಲೂಕಿನ ಶಂಕರನಾರಾಯಣ ಗ್ರಾಮ ಪಂಚಾಯತ್ ಎದುರಿನ ಗೋಳಿಕಟ್ಟೆ ಗುಡ್ಡೆಯ ಮೇಲಿನ ಬಿ.ಎಸ್.ಎನ್.ಎಲ್ ಮೈಕ್ರೋ ಟವರ್ ಕಟ್ಟಡದ ಒಳಗೆ ಅಳವಡಿಸಿದ್ದ 24 ನಿರುಪಯುಕ್ತ ಬ್ಯಾಟರಿಗಳಲ್ಲಿ 6 ಬ್ಯಾಟರಿಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಉದ್ಯಾವರ ಪಿತ್ರೋಡಿ ಸಮೀಪದ ನಿವಾಸಿ ಕೃಷ್ಣ (45), ಬಂಟ್ವಾಳ ಫರಂಗಿಪೇಟೆ ಮೇರಮಜಲು ಮೂಲದ ಬದ್ರುರುದ್ದೀನ್ (38) ಹಾಗೂ ಹೊನ್ನಾವರ ಕರ್ಕಿ ಮೂಲದ, ಪ್ರಸ್ತುತ ಲಕ್ಷ್ಮೀನಗರ ನಿವಾಸಿ ಉಸ್ಮಾನ್ (38) ಬಂಧಿತ ಆರೋಪಿಗಳು.

ಘಟನೆ ವಿವರ: ನ.23‌ರಿಂದ ನ.27 ಮಧ್ಯಾವಧಿಯಲ್ಲಿ ಈ ಘಟನೆ ನಡೆದಿತ್ತು. ಕಳ್ಳರು ಬಿ.ಎಸ್.ಎನ್.ಎಲ್ ಟವರ್ ಕಟ್ಟಡದ ಒಳಗೆ ಪ್ರವೇಶಿಸಿ ಒಳಗೆ ಇರಿಸಿದ್ದ ಬ್ಯಾಟರಿಗಳನ್ನು ಕಳವುಗೈದ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ನ.28 ರಂದು ಶಂಕರನಾರಾಯಣ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಬ್ಯಾಟರಿ ಹಾಗೂ ಕಳ್ಳತನಕ್ಕೆ ಬಳಸಿದ ಪಿಕಪ್ ವಾಹನ ಸಮೇತ ಸುಮಾರು 4,60,000 ರೂಪಾಯಿ ಮೌಲ್ಯದ ಸೊತ್ತು ಮತ್ತು ವಾಹನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷ ಡಾ. ಕೆ.ಅರುಣ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷ ಎಸ್.ಟಿ. ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಕುಂದಾಪುರ ಪೊಲೀಸ್ ವೃತ್ತದ ಸಿಪಿಐ ಜಯರಾಮ ಡಿ. ಗೌಡ ನಿರ್ದೇಶನದಲ್ಲಿ ಈ ಕಾರ್ಯಾಚರಣೆ‌ ನಡೆದಿದ್ದು ಶಂಕರನಾರಾಯಣ ಠಾಣೆ ಪಿಎಸ್ಐ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News