ಸೈಂಟ್ ಮೇರೀಸ್ ದ್ವೀಪಕ್ಕೆ ಬೋಟ್‌ಗಳ ಸಂಚಾರ ಪ್ರಾರಂಭ: ಉಡುಪಿ ಡಿಸಿ ಡಾ. ವಿದ್ಯಾಕುಮಾರಿ
ಉಡುಪಿ, ಅ.19: ಕರಾವಳಿಯ ಪ್ರವಾಸಿ ತಾಣವಾದ ಸೈಂಟ್ ಮೇರೀಸ್ ದ್ವೀಪಕ್ಕೆ ಮಲ್ಪೆಯಿಂದ ಪ್ರವಾಸಿ ಬೋಟುಗಳ ಸಂಚಾರ ಮೊನ್ನೆ ಪ್ರಾರಂಭಗೊಂಡಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ 2.50 ಲಕ್ಷ ರೂ. ಹಣ ಸಂಗ್ರಹವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಪ್ರತಿ ವರ್ಷ ಮೇ 15ರಿಂದ ಸೆಪ್ಟಂಬರ್ 15ರವರೆಗೆ ದ್ವೀಪ ಪ್ರವೇಶಕ್ಕೆ ಜಿಲ್ಲಾಡಳಿತದ ನಿರ್ಬಂಧವಿರುತ್ತದೆ. ಆದರೆ ಈ ಬಾರಿ ಪ್ರಾಕೃತಿಕ ಹಾಗೂ ಟೆಂಡರ್ ಪ್ರಕ್ರಿಯೆ ಸೇರಿದಂತೆ ಇತರ ಕಾರಣಗಳಿಂದ ಒಂದು ತಿಂಗಳು ವಿಳಂಬವಾಗಿದೆ. ಆದರೂ ಜನರಿಂದ ಒಳ್ಳೆಯ ರೆಸ್ಪಾನ್ಸ್ ದೊರಕುತ್ತಿದೆ ಎಂದವರು ಹೇಳಿದರು.
ಈ ಬಾರಿ ಸೈಂಟ್ ಮೇರೀಸ್ ಐಲೆಂಡ್‌ಗೆ ಪ್ರವಾಸಿಗರನ್ನು ಕರೆದೊಯ್ಯುವು ದನ್ನು ಟೆಂಡರ್ ಮೂಲಕ ನೀಡಿದ್ದು, ಇದರಿಂದ ಜಿಲ್ಲಾಡಳಿತಕ್ಕೆ ಭರ್ಜರಿ ಎನ್ನಬಹುದಾದ 1.85 ಕೋಟಿ ರೂ.ಗಳ ಭಾರೀ ಆದಾಯ ಸಿಕ್ಕಿದೆ. ಅದೇ ರೀತಿ ಆಹಾರ ಮತ್ತು ಪಾರ್ಕಿಂಗ್ ಸೇವೆ ಮಾತ್ರವಲ್ಲದೇ ಸೀವಾಕ್‌ಗೂ ಟೆಂಡರ್ ಕರೆದಿದ್ದು, ಇದರಿಂದಲೂ ನಿರೀಕ್ಷೆಗಿಂತ ಅಧಿಕ ಆದಾಯವನ್ನು ಜಿಲ್ಲಾಡಳಿತ ನಿರೀಕ್ಷಿಸಿದೆ ಎಂದು ಅವರು ತಿಳಿಸಿದರು.
ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಆದಾಯದ ಶೇ.50ರಷ್ಟನ್ನು ಮಾತ್ರ ಇಲ್ಲಿನ ಅಭಿವೃದ್ಧಿಗೆ ಬಳಸಿ ಉಳಿದ ಶೇ.50ರಷ್ಟು ಆದಾಯವನ್ನು ಜಿಲ್ಲೆಯ ಉಳಿದ ಪ್ರವಾಸಿತಾಣಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಜಿಲ್ಲಾ ಸಮಿತಿಗೆ ನೀಡುವಂತೆ ತಿಳಿಸಲಾ ಗಿದೆ ಎಂದರು.
ಆಸರೆ ಬೀಚ್‌ನಿಂದ ಬೋಟಿಂಗ್: ಮಲ್ಪೆ ಸಮೀಪದ ಬಡಾನಿಡಿಯೂರು ಗ್ರಾಮದಲ್ಲಿರುವ ಆಸರೆ ಬೀಚ್‌ನ್ನು ಸಹ ಉಳಿದ ಬೀಚ್‌ಗಳಂತೆ ಅಭಿವೃದ್ಧಿ ಪಡಿಸಲಾಗುತಿದ್ದು, ಅಲ್ಲಿಂದಲೂ ಸೈಂಟ್ ಮೇರೀಸ್ ದ್ವೀಪಕ್ಕೆ ಬೋಟಿಂಗ್ ವ್ಯವಸ್ಥೆ ಪ್ರಾರಂಭಿ ಸುವ ಯೋಜನೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇನ್ನೆರಡು ಕಡೆ ಸ್ಕೂಬಾ ಡೈವಿಂಗ್: ಸದ್ಯ ಸಾಲಿಗ್ರಾಮ ಹಾಗೂ ಕುಂದಾಪುರದ ಕೋಡಿಯಲ್ಲಿ ಕಯಾಕಿಂಗ್ ನಡೆಯುತ್ತಿದೆ. ಕುಂದಾಪುರದ ಎರಡು ಕಡೆಗಳಲ್ಲಿ ಸ್ಕೂಬಾ ಡೈವಿಂಗ್‌ನ್ನು ಪ್ರಾರಂಭಿಸಲು ಖಾಸಗಿಯವರು ಅರ್ಜಿ ಹಾಕಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸದ್ಯ ಕಾಪುವಿನಲ್ಲಿ ಮಾತ್ರ ಸ್ಕೂಬಾ ಡೈವಿಂಗ್ ನಡೆಯುತ್ತಿದೆ ಎಂದರು.
ಪಡುಬಿದ್ರಿಯ ಬ್ಲೂಪ್ಲ್ಯಾಗ್ ಬೀಚ್‌ಗೆ ಪ್ರವಾಸಿಗರ ಪ್ರವೇಶಕ್ಕಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ನಿನ್ನೆ ಸಭೆ ಕರೆದು ಚರ್ಚಿಸಲಾಗಿದೆ ಎಂದು ಡಾ.ವಿದ್ಯಾಕುಮಾರಿ ತಿಳಿಸಿದರು.