ಎಂ.ಗೋವಿಂದ ಪೈಗಳು ಕೃತಿಗಳ ಮೂಲಕ ಎಲ್ಲಾ ಧರ್ಮ, ಸಂಸ್ಕೃತಿಗಳನ್ನು ಒಟ್ಟಿಗೆ ತಂದವರು: ಪ್ರೊ.ಬಿ.ಎ. ವಿವೇಕ ರೈ

Update: 2024-03-23 16:24 GMT

ಉಡುಪಿ: ಕನ್ನಡದ ಮೊದಲ ರಾಷ್ಟ್ರಕವಿ ಎನಿಸಿದ ಮಂಜೇಶ್ವರ ಗೋವಿಂದ ಪೈಗಳು ಗಾಂಧಿವಾದಿ ಸಾಹಿತಿ. ಎಲ್ಲಾ ಧರ್ಮ ಹಾಗೂ ಸಂಸ್ಕೃತಿಗಳನ್ನು ಒಟ್ಟಿಗೆ ತಂದವರು ಅವರು ಎಂದು ವಿಶ್ರಾಂತ ಕುಲಪತಿಗಳಾದ, ತುಳು ಜಾನಪದ ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ಗಳ ಜಂಟಿ ಆಶ್ರಯದಲ್ಲಿ 141ನೇ ಜನ್ಮದಿನೋತ್ಸವದಂದು ರಾಷ್ಟ್ರಕವಿ ಗೋವಿಂದ ಪೈ ಸಂಸ್ಮರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಗೋವಿಂದ ಪೈಗಳು ಏಸು ಕ್ರಿಸ್ತನ ಕೊನೆಯ ದಿನಗಳು ಕುರಿತ ‘ಗೊಲ್ಗೊಥಾ’, ಬುದ್ಧನ ಕೊನೆಯ ದಿನಗಳ ಕುರಿತ ‘ವೈಶಾಖಿ’, ಕೃಷ್ಣನ ಕೊನೆಯ ದಿನಗಳ ಕುರಿತ ‘ಪ್ರಭಾಸ’ ಹಾಗೂ ಗಾಂಧೀಜಿ ಅವರ ಕೊನೆಯ ದಿನಗಳ ಕುರಿತ ‘ದೆಹಲಿ’ ಕೃತಿಗಳನ್ನು ರಚಿಸಿದ್ದರು ಎಂದು ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಕಟಿಸಿದ ಕನಕ ಚಿಂತನ ವಿಸ್ತರಣ ಕೃತಿಯನ್ನು ಬಿಡುಗಡೆಗೊಳಿಸಿದ ಪ್ರೊ.ವಿವೇಕ್ ರೈ ತಿಳಿಸಿದರು.

ಕಾವ್ಯ ರಚನೆಯ ಮೂಲಕ ತಮ್ಮ ಸಾಹಿತ್ಯಿಕ ಬದುಕನ್ನು ಪ್ರಾರಂಭಿಸಿದ ಗೋವಿಂದ ಪೈಗಳು ಪತ್ನಿಯ ನಿಧನದ ಬಳಿಕ 1927ರಲ್ಲಿ ಸಂಶೋಧನೆಯತ್ತ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿದ್ದರು. ತುಳುನಾಡ ಇತಿಹಾಸ, ಕರ್ನಾಟಕ ಇತಿಹಾಸ, ಭಾರತ ಇತಿಹಾಸದ ಕುರಿತಂತೆ ಅವರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ ಎಂದರು.

ಗೋವಿಂದ ಪೈಗಳು ವಿಶ್ವ ಮಾನವ ಧರ್ಮವನ್ನು ಬುದ್ಧನ ಮೂಲಕ ಪ್ರತಿಪಾದಿಸಿದ್ದಾರೆ. ಆದರೆ ಇಂದು ಇಂಥ ವಿಶಾಲತೆ ಕಾಣೆಯಾಗಿದ್ದು, ಸಂಕುಚಿತತೆ ಕಾಣಿಸಿಕೊಂಡಿದೆ. ಕ್ಷಮಾಗುಣವೇ ನಮ್ಮಲ್ಲಿಂದು ಕಾಣೆಯಾಗಿದೆ ಎಂದು ಡಾ.ವಿವೇಕ ರೈ ಹೇಳಿದರು.

ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎ.ವಿ.ನಾವಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದರೆ ದವಳ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕಾ ಗಣಪಯ್ಯ ಭಟ್ ಅವರು ‘ತುಳುವ ಇತಿಹಾಸ-ಗೋವಿಂದ ಪೈಯವರ ದೃಷ್ಟಿ-ಸೃಷ್ಟಿ’ ವಿಷಯದ ಕುರಿತು ಹಾಗೂ ಮೈಸೂರಿನ ನಿವೃತ್ತ ಪ್ರಾಚಾರ್ಯ ಡಾ.ಶಿವಾಜಿ ಜೋಯಿಸ್ ಅವರು ‘ಗೋವಿಂದ ಪೈ ಸಾಹಿತ್ಯಿಕ ಕೊಡುಗೆ: ಅಲಭ್ಯ ಬರಹಗಳು- ಕೆಲವು ಟಿಪ್ಪಣಿಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ನಿರೂಪಿಸಿದ ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಅವರು ಕೊನೆಯಲ್ಲಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News