ಕುಂದಾಪುರ ತಾಲೂಕು ಕಚೇರಿಗಳಲ್ಲಿ ಬ್ರೋಕರ್ ಹಾವಳಿ: ದಲಿತರ ಕುಂದು ಕೊರತೆ ಸಭೆಯಲ್ಲಿ ಮುಖಂಡರ ಆಕ್ರೋಶ

Update: 2023-12-08 14:02 GMT

ಕುಂದಾಪುರ, ಡಿ.8: ಹೆಮ್ಮಾಡಿ, ಗಂಗೊಳ್ಳಿ ಸಹಿತ ಬೇರೆಬೇರೆ ಕಡೆ ಮೀನುಗಾರಿಕಾ ಸಹಕಾರಿ ಸಂಘಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯದವರಿಗೆ ‘ಎ’ ಕ್ಲಾಸ್ ಸದಸ್ಯತ್ವ ನೀಡದೇ ಇದ್ದು, ಈ ಬಗ್ಗೆ ಕಳೆದ 15 ವರ್ಷದಿಂದ ಹೋರಾಟ ನಡೆಸಲಾಗುತ್ತಿದೆ. ಸೋಮವಾರ ಅಗತ್ಯ ದಾಖಲೆಗಳೊಂದಿಗೆ ಸೊಸೈಟಿಗೆ ತೆರಳುತ್ತೇವೆ. ಸದಸ್ಯತ್ವ ನೀಡದೇ ಇದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ದಲಿತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಅಪರಾಹ್ನ ನಡೆದ ಕುಂದಾಪುರ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆಗಳ ಸಭೆಯಲ್ಲಿ ವಿವಿಧ ಸಂಘಟನೆಗಳ ನಾಯಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಈಗ ಸಾಮಾನ್ಯವಾಗಿರುವ ‘ಬ್ರೋಕರ್’ಗಳ ಕುರಿತಂತೆಯೂ ಇವರು ತೀವ್ರ ಅಸಮಧಾನ ಹೊರ ಹಾಕಿದರು.

ಕೊಮೆ-ಕೊರವಡಿ ಸೊಸೈಟಿಯಲ್ಲಿ ರೋಸ್ಟರ್ ಪದ್ಧತಿ ಅನುಸರಿಸಲಾಗುತ್ತಿಲ್ಲ ಎಂಬ ಆರೋಪ ಮಾಡಿದ ದಲಿತ ಮುಖಂಡರು ದಲಿತ ಸಮುದಾಯದ ಹಕ್ಕು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಇಂತಹ ಸೊಸೈಟಿಗಳಿಗೆ ಸರಕಾರ ದಿಂದ ನೀಡುವ ಸಬ್ಸಿಡಿ ನಿಲ್ಲಿಸಿ ಎಂದು ಒಕ್ಕೊರಳಿನಿಂದ ಆಗ್ರಹಿಸಿದರು.

ಕುಂದಾಪುರ ಮಿನಿ ವಿಧಾನಸೌಧ ಹಾಗೂ ಬೈಂದೂರು ತಾಲೂಕಿನ ಆಡಳಿತ ಸೌಧದ ಎದುರು ಅಂಬೇಡ್ಕರ್ ಪುತ್ಥಳಿ ನಿರ್ಮಿಸಬೇಕು. ಸಹಕಾರಿ ಸೊಸೈಟಿಯಲ್ಲಿ ದಲಿತರನ್ನು ಕಡೆಗಣಿಸುವವರ ವಿರುದ್ಧ ಅಸ್ಪ್ರಶ್ಯತೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ದಲಿತ ಮುಖಂಡರಾದ ಉದಯ್ ಕುಮಾರ್ ತಲ್ಲೂರು, ಚಂದ್ರಮ ತಲ್ಲೂರು, ಗೋಪಾಲ ವಿ. ಮೊದಲಾದವರು ಆಗ್ರಹಿಸಿದರು.

ಸುಳ್ಳು ಜಾತಿ ಪ್ರಮಾಣಪತ್ರ, ಡಿಸಿ ಮನ್ನಾ ಭೂಮಿ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿ ವಿರುದ್ಧವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಎಸ್ಸಿ-ಎಸ್ಟಿ ಕುಟುಂಬಕ್ಕೆ ಕನಿಷ್ಟ 2 ಎಕರೆ ಕೃಷಿ ಭೂಮಿ ನೀಡಿದಲ್ಲಿ ಅವರ ಬಡತನ ನಿವಾರಣೆ ಸಾಧ್ಯ ಎಂದು ಮುಖಂಡರಾದ ಮೋಹನಚಂದ್ರ ಕಾಳಾವರ ಆಗ್ರಹಿಸಿದರು.

ಪ್ರತಿ ಸಭೆಗೂ ಹೊಸ ಹೊಸ ಅಧಿಕಾರಿಗಳು ಬರುತ್ತಾರೆ. ಆದರೆ ನಮ್ಮ ಹಳೆ ಸಮಸ್ಯೆಗಳಿನ್ನೂ ಬಗೆಹರಿದಿಲ್ಲ ಎಂದು ಮಂಜುನಾಥ ನಾಯ್ಕ್ ಅಸಮಾಧಾನ ಹೊರಹಾಕಿದರು.

ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ತಿಂಗಳಿಗೊಮ್ಮೆ ದಲಿತರ ಕುಂದುಕೊರತೆ ಸಭೆ ನಡೆಸಬೇಕು. ಫೆಬ್ರವರಿ ಅಂತ್ಯ ದೊಳಗೆ ತಹಶೀಲ್ದಾರ್ ನೇತೃತ್ವ ತಾಲೂಕು ಮಟ್ಟದ ಸಭೆ ನಡೆಸಬೇಕು ಎಂದು ಆಗ್ರಹಿಸಿದ ದಲಿತ ಮುಖಂಡರು, ಕಳೆದ ಮೂರ್ನಾಲ್ಕು ವರ್ಷದಿಂದ ಡಿಸಿ, ಎಸ್ಪಿ ನೇತೃತ್ವದಲ್ಲಿ ಸಭೆ ನಡೆಯದಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಎಂಎಫ್ ಅಡಿಯಲ್ಲಿ ಬರುವ ದ.ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸಂಬಂಧಿತ ಪ್ರಶ್ನೆಗಳಿದ್ದರೂ ಸಂಬಂಧಿಸಿದವರು ಸಭೆಗೆ ಬಾರದ ಬಗ್ಗೆ ಮಂಜುನಾಥ್ ದೂರಿದರು.

ಸಭೆಯಲ್ಲಿ ಕೊರಗ ಶ್ರೇಯೋಭಿವೃದ್ಧಿ ಸಂಘಟನೆಯ ಗಣೇಶ್ ಕೊರಗ, ಪುರಸಭಾ ಸದಸ್ಯ ಪ್ರಭಾಕರ ವಿ., ದಲಿತ ಸಂಘಟನೆಗಳ ಪ್ರಮುಖರಾದ ಸುಶೀಲಾ ನಾಡ, ಶ್ರೀನಿವಾಸ ಮಲ್ಯಾಡಿ, ಚಂದ್ರಶೇಖರ ಗುಲ್ವಾಡಿ ಮೊದಲಾದವರಿದ್ದರು.

ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ಸಭಾಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಶಶಿಧರ್ ಜಿ., ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ವೇದಿಕೆಯಲ್ಲಿದ್ದರು.

ಕುಂದಾಪುರ ತಾಲೂಕು ಕಚೇರಿ, ಪುರಸಭೆ ಬಗ್ಗೆ ಆಕ್ರೋಶ..!

ಕುಂದಾಪುರದಲ್ಲಿ ವಿವಿಧ ಇಲಾಖೆಗಳಲ್ಲಿ ಅದೆಷ್ಟೋ ವರ್ಷದಿಂದ ಹುದ್ದೆಯಲ್ಲಿ ಅಧಿಕಾರಿ, ಸಿಬ್ಬಂದಿಗಳಿದ್ದಾರೆ. ಕೆಲವರಿಗೆ ವರ್ಗಾವಣೆ ಆಗುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಬ್ರೋಕರ್ ಹಾವಳಿ ಹೆಚ್ಚಿದೆ. ಬ್ರೋಕರ್‌ಗಳ ಮೂಲಕ ಹೋದರೆ ಮಾತ್ರ ಕೆಲಸವಾಗುತ್ತೆ ಎನ್ನವಷ್ಟರ ಮಟ್ಟಿಗೆ ಅವ್ಯವಸ್ಥೆ ಆಗರವಾಗಿದೆ. ಕೆಲವು ಇಲಾಖೆ ಕಚೇರಿಗೆ ಸಿಸಿ ಟಿವಿ ಅಳವಡಿಸಿದರೆ ಭ್ರಷ್ಟರನ್ನು ಹಿಡಿಯಬಹುದು. ಬ್ರೋಕರ್ ಹಾವಳಿಗೆ ಕಡಿವಾಣ ಹಾಕದಿದ್ದರೆ ತಹಶೀಲ್ದಾರ್ ಹೆಸರು ಹಾಳಾಗುತ್ತದೆ ಎಂದು ಗೋಪಾಲ ಕಳಿಂಜೆ, ನಾಗರಾಜ ಉಪ್ಪಿನಕುದ್ರು ಧ್ವನಿಯೆತ್ತಿದ್ದು ಇದಕ್ಕೆ ಇತರ ದಲಿತ ಮುಖಂಡರು ಧ್ವನಿಯಾದರು.

ಕುಂದಾಪುರ ಟಿ.ಟಿ ರಸ್ತೆಯಲ್ಲಿನ ದಲಿತ ಮಹಿಳೆ ಮನೆಯೊಂದಕ್ಕೆ ನೀಡಿದ ವಿದ್ಯುತ್ ಸಂಪರ್ಕ ವಿಚಾರದಲ್ಲಿ ಪುರಸಭೆ ಮುಖ್ಯಾಧಿಕಾರಿ ನಡೆದುಕೊಂಡ ರೀತಿ ಬಗ್ಗೆ ಮುಖಂಡರಾದ ರಾಜು ಬೆಟ್ಟಿನಮನೆ, ವಾಸುದೇವ ಮುದೂರು ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆಯಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ,ಬಡವರ ಯಾವುದೇ ಕೆಲಸ ಆಗುತ್ತಿಲ್ಲ ಎಂದವರು ಆರೋಪಿಸಿದರು.

ಸಭೆ ಆರಂಭ, ಅಂತ್ಯದಲ್ಲಿ ಬೆಳಕಿನ ಸಮಸ್ಯೆ..!

ಸಭೆ ಆರಂಭಕ್ಕೂ ಮುನ್ನ ತಾ.ಪಂ ಸಭಾಂಗಣದಲ್ಲಿ ವಿದ್ಯುತ್ ಸಂಪರ್ಕ ಕಡಿತವಿದ್ದ ಕಾರಣ ಸೂಕ್ತ ಧ್ವನಿ, ಬೆಳಕಿಲ್ಲದೆ ಸಭೆ ಆರಂಭ ಮಾಡುವುದಕ್ಕೆ ದಸಂಸ ಮುಖಂಡರು ಆಕ್ಷೇಪವೆತ್ತಿದರು.

ಕಳೆದ 30 ವರ್ಷಗಳಿಂದ ಸಮಸ್ಯೆ ನಡುವೆಯೇ ಕಾಟಾಚಾರಕ್ಕೆ ದಲಿತ ಕುಂದುಕೊರತೆ ಸಭೆ ನಡೆಸುವುದಕ್ಕೆ ರಾಜು ಬೆಟ್ಟಿನಮನೆ, ಗೋಪಾಲ ಕಳಿಂಜೆ, ವಿಜಯ ಕೆ.ಎಸ್ ಆಕ್ರೋಶ ವ್ಯಕ್ತಪಡಿಸಿದರು. ಸಭೆ ಅಂತ್ಯದ ವೇಳೆಯೂ ವಿದ್ಯುತ್ ಕೈಕೊಟ್ಟು ಕೆಲ ಕಾಲ ಬೆಳಕಿಲ್ಲದೆ ಸಭೆಯನ್ನು ನಡೆಸಬೇಕಾಯಿತು.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News