ಮುಂದುವರಿದ ಮಳೆ: ಕರಾವಳಿಗೆ ರೆಡ್ ಅಲರ್ಟ್ ಘೋಷಣೆ; ಉಡುಪಿಯಲ್ಲಿ ಇಬ್ಬರು ಬಲಿ

Update: 2023-07-24 14:47 GMT

ಉಡುಪಿ, ಜು.24: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಇಂದೂ ತನ್ನ ಪ್ರತಾಪ ಮುಂದುವರಿಸಿದೆ. ಹವಾಮಾನ ಇಲಾಖೆ ಮಂಗಳವಾರ ಮುಂಜಾನೆಯವರೆಗೆ ಕರಾವಳಿಯಲ್ಲಿ ರೆಡ್ ಅಲರ್ಟ್ (204.4ಮಿ.ಮೀ ಅಧಿಕ ಮಳೆ) ಘೋಷಿಸಿದ್ದರೆ, ನಂತರ ಎರಡು ದಿನಗಳಿಗೆ ಆರೆಂಜ್ ಅಲರ್ಟ್ (115.6ರಿಂದ 204.4ಮಿ.ಮೀ)ನ್ನು ನೀಡಿದೆ.

ಉಡುಪಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಹಳ್ಳಾಡಿ-ಹರ್ಕಾಡಿಯ ಗೋಕುಲದಾಸ್ ಪ್ರಭು ಇಂದು ಮುಂಜಾನೆ ರಸ್ತೆ-ಚರಂಡಿ ಅರಿಯದೇ ನೀರು ತುಂಬಿದ ಚರಂಡಿಗೆ ಬಿದ್ದು ಮೃತಪಟ್ಟರೆ, ರಚನಾ ಎಂಬ 13ರ ಹರೆಯದ ಬಾಲಕಿ ರವಿವಾರ ದನ ಮೇಯಿಸಲು ಹೋಗಿ ಹೊಳೆ ನೀರಿಗೆ ಅಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆ.

ಕೊಲ್ಲೂರು ಸಮೀಪದ ಅರಸಿನಗುಂಡಿ ಜಲಪಾತ ನೋಡಲು ರವಿವಾರ ಸ್ನೇಹಿತನೊಂದಿಗೆ ಬಂದ ಭದ್ರಾವತಿಯ ಶರತ್ (23)ಬಂಡೆಯ ಮೇಲೆ ನಿಂತಿದ್ದಾಗ, ಕಾಲುಜಾರಿ ಆಯತಪ್ಪಿ ಸೌರ್ಣಿಕ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ.

ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಾಡಿ ಹರ್ಕಾಡಿ ನಿವಾಸಿ ಗೋಕುಲದಾಸ್ ಪ್ರಭು (54) ಇಂದು ಮುಂಜಾನೆ 7:00ಗಂಟೆ ಸುಮಾರಿಗೆ ಸಾಮಾನು ತರಲೆಂದು ಹರ್ಕಾಡಿ ಗ್ರಾಮದ ಮಕ್ಕಿಮನೆಯಲ್ಲಿನ ಅಂಗಡಿಗೆ ತೆರಳಿದ್ದು, 8:15ಗಂಟೆಯಾದರೂ ಮನೆಗೆ ಮರಳದಿದ್ದಾಗ ಮನೆಯವರು ಹುಡುಕಿದಾಗ ಮಕ್ಕಿಮನೆ ತೋಡಿನಲ್ಲಿ ಅವರ ಶವ ಪತ್ತೆಯಾಯಿತು.

ಭಾರೀ ಮಳೆಯಿಂದ ರಸ್ತೆ ಹಾಗೂ ತೋಡು ನೀರಿನಿಂದ ತುಂಬಿ ಹರಿಯುತಿದ್ದು, ಅವರಿಗೆ ರಸ್ತೆ ಹಾಗೂ ಚರಂಡಿ ಯಾವುದೆಂದು ತಿಳಿಯದೇ ನೀರು ತುಂಬಿದ ಚರಂಡಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಟ ಪೊಲೀಸರು ತಿಳಿಸಿದ್ದಾರೆ.

ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಶೇಡಿಮನೆ ಗ್ರಾಮದ ದರ್ಖಾಸ್ತು ಎಂಬಲ್ಲಿ ರಚನಾ (13) ತನ್ನ ಅಜ್ಜಿ ಸಾಧನಾ ಶೆಡ್ತಿಯವರೊಂದಿಗೆ ರವಿವಾರ ಬೆಳಗ್ಗೆ 11:00ಗಂಟೆಗೆ ದನಕರುಗಳನ್ನು ಮೇಯಿಸಲು ಹೋದಾಗ ಪಕ್ಕದ ಗಂಗಡಬೈಲು ಹೊಳೆ ಮಳೆಯಿಂದ ತುಂಬಿ ಹರಿಯುತಿದ್ದು, ರಚನಾ ಹೊಳೆಬದಿಗೆ ಹೋದವಳು ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನ ಪ್ರವಾಹ ದಲ್ಲಿ ಕೊಚ್ಚಿಕೊಂಡು ಹೋಗಿದ್ದಳು.ಬಳಿಕ ಆಕೆಯ ಮೃತಶರೀರ 2ಕಿ.ಮೀ. ದೂರದ ಮುಂಡಿಬೈಲು ಎಂಬಲ್ಲಿ ಹೊಳೆ ನೀರಿನಲ್ಲಿ ಮರಕ್ಕೆ ಸಿಕ್ಕಿಹಾಕಿಕೊಂಡು ಅಪರಾಹ್ನ 2:00ಗಂಟೆಗೆ ಪತ್ತೆಯಾಗಿತ್ತು.

ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯುದ್ದಕ್ಕೂ ಹರಿಯುವ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ನದಿಯ ಅಕ್ಕಪಕ್ಕದ ತಗ್ಗು ಪ್ರದೇಶಗಳಲ್ಲಿ ನೆರೆ ಉಂಟಾಗಿದೆ. ಹೀಗಾಗಿ ಜಿಲ್ಲೆಯ ನೂರಾರು ಮನೆಗಳು ನೀರಿನಿಂದ ಆವೃತ್ತವಾಗಿವೆ.

50 ಮನೆಗಳಿಗೆ ಹಾನಿ: ಸತತ ಮಳೆಯಿಂದ ಜಿಲ್ಲೆಯಲ್ಲಿ 50 ಮನೆಗಳಿಗೆ ಹಾನಿಯಾಗಿರುವ ವರದಿಗಳು ಬಂದಿವೆ. ಅಲ್ಲದೇ ಮೂರು ಜಾನುವಾರು ಕೊಟ್ಟಿಗೆಗಳಿಗೂ ಭಾಗಶ: ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಕೆಲವು ಕಡೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸಲಾಗಿದೆ. ಅಗತ್ಯ ಬಿದ್ದರೆ ಮನೆಯವರನ್ನು ಸಹ ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ. ಜನರಿಗಾಗಿ ತೆರೆಯಲಾದ ಕಾಳಜಿ ಕೇಂದ್ರಗಳಿಗೆ ಯಾರೂ ತೆರಳಿಲ್ಲ. ಕಾಪು ತಾಲೂಕು ಯೇಣಗುಡ್ಡೆ ಗ್ರಾಮದ ಫಾರೆಸ್ಟ್‌ಗೇಟ್ ಬಳಿಯ ವಿಶ್ವನಾಥ ಕ್ಷೇತ್ರ ಕಾಳಜಿ ಕೇಂದ್ರದಲ್ಲಿ ಮಾತ್ರ ನಾಲ್ವರು ಆಶ್ರಯ ಪಡೆದಿದ್ದರು.

ರೆಡ್ ಅಲರ್ಟ್: ಬೆಂಗಳೂರಿನ ಹವಾಮಾನ ಕೇಂದ್ರವು ಕರಾವಳಿಗೆ ನಾಳೆ ಮುಂಜಾನೆಯವರೆಗೆ ರೆಡ್‌ಅಲರ್ಟ್, 27ರ ಮುಂಜಾನೆಯವರೆಗೆ ಆರೆಂಜ್ ಅಲರ್ಟ್ ಹಾಗೂ ಜು.28 ಮತ್ತು 29ರಂದು ಎಲ್ಲೋ ಅಲರ್ಟ್‌ನ್ನು ಘೋಷಿಸಿದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 45ಕಿ.ಮೀ. ವೇಗದ ಗಾಳಿಯು ಸಮುದ್ರ ತೀರದುದ್ದಕ್ಕೂ ಬೀಸಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಮಂಗಳವಾರ ಮಧ್ಯರಾತ್ರಿ 11:30ರವರೆಗೆ ಅರಬಿಸಮುದ್ರದಲ್ಲಿ 3.5ರಿಂದ 4ಮೀ. ಎತ್ತರದ ತೆರೆಗಳು ಮಂಗಳೂರಿನಿಂದ ಕಾರವಾರದವರೆಗೆ ದಡವನ್ನು ಅಪ್ಪಳಿಸಲಿದೆ. ಹೀಗಾಗಿ ಮೀನುಗಾರರು ಮೀನುಗಾರಿಕೆಗೆಂದು ಸಮುದ್ರಕ್ಕಿಳಿ ಯದಂತೆ ಎಚ್ಚರಿಕೆ ನೀಡಿದೆ.

99.7ಮಿ.ಮೀ.ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 99.7ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ 120.9ಮಿ.ಮೀ. ಮಳೆಯಾದರೆ, ಉಡುಪಿಯಲ್ಲಿ ಕನಿಷ್ಠ 72.9ಮಿ.ಮೀ. ಮಳೆಯಾಗಿದೆ.

ಇನ್ನುಳಿದಂತೆ ಹೆಬ್ರಿಯಲ್ಲಿ 110.5ಮಿ.ಮೀ, ಕುಂದಾಪುರದಲ್ಲಿ 104.2, ಕಾರ್ಕಳದಲ್ಲಿ 100.2,ಬ್ರಹ್ಮಾವರದಲ್ಲಿ 77.4 ಹಾಗೂ ಕಾಪುವಿನಲ್ಲಿ 75.0 ಮಿ.ಮೀ. ಮಳೆಯಾಗಿದೆ.

ಮಂಗಳವಾರವೂ ಶಾಲೆಗಳಿಗೆ ರಜೆ

ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಅತ್ಯಧಿಕ ಮಳೆಯ ಸಾಧ್ಯತೆಯ ರೆಡ್ ಅಲರ್ಟ್‌ನ ಮುನ್ಸೂಚನೆ ನೀಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ಜು.25ರ ಮಂಗಳವಾರವೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಫೋಟೊ, ವೀಡಿಯೋ ನಿಷೇಧ

ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಸಮುದ್ರ ದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ನದಿಗಳು, ಹಳ್ಳ, ತೋಡುಗಳು ಸಹ ತುಂಬಿ ಹರಿಯುತ್ತಿರುವ ಕಾರಣ,ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು, ಬೀಚ್‌ಗಳು, ನದಿಗಳು ಹಾಗು ಜಲಪಾತಗಳ ಬಳಿ ತೆರಳದಂತೆ ಹಾಗೂ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.


 






 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News