ಕಾರ್ಪೊರೇಟ್ ಕೋಮುವಾದಿ ಕೂಟ ಭಾರತ ಬಿಟ್ಟು ತೊಲಗಲಿ: ಬಾಲಕೃಷ್ಣ ಶೆಟ್ಟಿ

Update: 2023-08-09 15:10 GMT

ಉಡುಪಿ, ಆ.9: ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಕ್ವಿಟ್ ಇಂಡಿಯಾ ಚಳವಳಿಯ ದಿನವಾದ ಇಂದು ನಾವು ಕಾರ್ಪೊರೇಟ್ ಕೋಮು ವಾದಿ ಕೂಟ ಭಾರತವನ್ನು ಬಿಟ್ಟು ತೊಲಗಿ ಎಂಬುದಾಗಿ ಘೋಷಿಸಬೇಕಾಗಿದೆ ಎಂದು ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿ, ದುಡಿತದ ಅವಧಿಯನ್ನು ದಿನಕ್ಕೆ 12ಗಂಟೆ ಹೆಚ್ಚಿಸಿರು ವುದರ ವಿರುದ್ಧ ಮತ್ತು ಜೀವನ ಯೋಗ್ಯ ಕನಿಷ್ಠ ವೇತನ 31,500ರೂ.ಗೆ ಹೆಚ್ಚಿಸಲು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಉಡುಪಿ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಬುಧವಾರ ಹಮ್ಮಿಕೊಳ್ಳಲಾದ ಪ್ರತಿಭಟನೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ಬಡತನ ಪ್ರಮಾಣ ಹೆಚ್ಚಾಗಿದೆ. ಆದುದರಿಂದ ಭಾರತವನ್ನು ಬಡತನ ಬಿಟ್ಟು ತೊಲಗುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು. ಬಡತನ ತೊಲಗಬೇಕಾದರೆ ಮೊದಲು ನಿರುದ್ಯೋಗ ಹೋಗಬೇಕು, ಬೆಲೆ ಏರಿಕೆ ಕಡಿಮೆಯಾಗಬೇಕು ಮತ್ತು ವಿಪರೀತ ಆಸ್ತಿ ಅಸಮಾನತೆ ತೊಲಗಬೇಕು. ಆದುದರಿಂದ ಕಾರ್ಪೊರೇಟ್ ಕೋಮುವಾದ ಕೂಟದ ನೇತೃತ್ವದ ವಹಿಸಿರುವ ಬಿಜೆಪಿ ಸರಕಾರ ಈ ಬಾರಿಯ ಚುನಾವಣೆ ಯಲ್ಲಿ ಬಿಟ್ಟು ಹೋದರೆ ಈ ದೇಶ ಅಭಿವೃದ್ಧಿಯಾಗುತ್ತದೆ ಎಂದರು.

ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ಕೋಮುವಾದಿಗಳು ದೇಶಾದ್ಯಂತ ಗಲಭೆಗಳನ್ನು ಸೃಷ್ಠಿಸಿ ದೇಶದ ಅಭಿವೃದ್ಧಿಯನ್ನು ತಡೆಯುತ್ತಿರುವುದಲ್ಲದೆ ಜನರ ಐಕ್ಯತೆಯನ್ನು ಮುರಿಯು ತ್ತಿದ್ದಾರೆ. ಈ ಮೂಲಕ ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಧಕ್ಕೆ ತರುತ್ತಿರುವ ಕೋಮುವಾದದ ವಿರುದ್ಧ ಸರಕಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ದೇಶವನ್ನು ಬ್ರಿಟೀಷರು ಕೊಳ್ಳೆ ಹೊಡೆದಂತೆ ಈಗ ನಮ್ಮ ದೇಶದ ಬಂಡವಾಳಶಾಹಿಗಳು ವಿದೇಶಿ ಬಂಡವಾಳ ಶಾಹಿಗಳ ಜೊತೆ ಸೇರಿಕೊಂಡು ರೈತರು, ಕಾರ್ಮಿಕರು, ಕೃಷಿಕೂಲಿಕಾರರನ್ನು ಕೊಳೆಹೊಡೆಯುತ್ತಿವೆ. ಇದಕ್ಕೆ ಸರಕಾರವೇ ಅವಕಾಶ ಮಾಡಿ ಕೊಟ್ಟಿದೆ. ಆದುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯ ವಿರುದ್ಧ ನಾವೆಲ್ಲ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಶಶಿಧರ ಗೊಲ್ಲ, ಕವಿರಾಜ್, ಶೇಖರ ಬಂಗೇರ, ಸಂಜೀವ ಬಳ್ಕೂರು, ಸಂಧ್ಯಾ, ನಳಿನಿ, ಉಮೇಶ್ ಕುಂದರ್, ರಾಮ ಕರ್ಕಡ, ಸುಭಾಷ್ ನಾಯ್ಕ್, ಸದಾಶಿವ ಪೂಜಾರಿ, ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News