ಆ.17ರಿಂದ 24 ಗಂಟೆಗಳ ಕಾಲ ವೈದ್ಯರ ಸೇವೆ ಸ್ಥಗಿತ
ಉಡುಪಿ, ಆ.16: ಕೊಲ್ಕತ್ತಾದಲ್ಲಿನ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಹಾಗೂ ನಂತರದ ಹಿಂಸೆ ವಿರೋಧಿಸಿ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘದ ನಿರ್ದೇಶನದಂತೆ ಉಡುಪಿ ಕರಾವಳಿ ಶಾಖೆಯ ಸದಸ್ಯರು ಆ.17ರ ಬೆಳಗ್ಗೆ 6ಗಂಟೆಯಿಂದ 18ರ ರವಿವಾರ ಬೆಳಗ್ಗೆ 6ಗಂಟೆಯವರೆಗೆ ತುರ್ತು ಚಿಕಿತ್ಸೆ ಯನ್ನು ಹೊರತುಪಡಿಸಿ ತಮ್ಮ ಕ್ಲಿನಿಕ್ ಹಾಗೂ ಆಸ್ಪತ್ರೆಗಳನ್ನು ಮುಚ್ಚಿ ಇತರ ಸೇವೆಗಳನ್ನು ಸ್ಥಗಿತಗೊಳಿಸಲಿದ್ದಾರೆ.
ಕೊಲ್ಕತ್ತಾ ಘಟನೆಯನ್ನು ಖಂಡಿಸಿ, ಜನ ಸಾಮಾನ್ಯರಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಆ.17ರ ಸಂಜೆ 6 ರಿಂದ 7ಗಂಟೆಯವರೆಗೆ ನಗರದ ಬೋರ್ಡ್ ಹೈಸ್ಕೂಲ್ ಬಳಿಯಿಂದ ಜೋಡುಕಟ್ಟೆ ವರೆಗೆ ಮೌನ ಮೆರವಣಿಗೆ ನಡೆಸಲಿದೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರಿಗೆ ಐಎಂಎ ನಿಯೋಗ ಮನವಿ ಸಲ್ಲಿಸಿದೆ ಎಂದು ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮೀ ತಿಳಿಸಿದ್ದಾರೆ.