ನೆಲ, ಜಲ, ಪ್ರಕೃತಿ ಸಂರಕ್ಷಣೆಗೆ ಒತ್ತು ಅಗತ್ಯ: ಭಟ್ಟಾರಕಚಾರು ಸ್ವಾಮೀಜಿ

ಶಿರ್ವ: ಪರಮಾತ್ಮನೇ ಪ್ರಪಂಚದ ಶ್ರೇಷ್ಠ ಇಂಜಿನಿಯರು. ವಿದ್ಯಾರ್ಥಿಗಳು ಆಧ್ಯಾತ್ಮವನ್ನು ಅರ್ಥ ಮಾಡಿಕೊಳ್ಳಬೇಕು. ನೆಲ, ಜಲ, ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಮೂಡಬಿದ್ರಿಯ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕಚಾರು ಕೀರ್ತಿ ಪಂಡಿತಾಚಾಂರ್ಯವರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.
ಬಂಟಕಲ್‌ನ ಶ್ರೀಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಇತ್ತೀಚೆಗೆ ಆಶೀವರ್ಚನ ನೀಡಿದರು.
ಅಧ್ಯಕ್ಷತೆಯನ್ನು ಉಡುಪಿ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ವಹಿಸಿದ್ದರು. ಬೆಂಗಳೂರಿನ ಐಟಿ ಕಂಪೆನಿ ಡಾಟಾ ಪ್ಯಾಟರ್ನ್ಸ್ ಲಿಮಿಟೆಡ್ ಮುಖ್ಯಸ್ಥ ಮತ್ತು ನಿರ್ದೇಶಕ ಶ್ರೀನಿವಾಸಗೋಪಾಲನ್ ರಂಗರಾಜನ್, ರೇಖಾಮೂರ್ತಿ ರಂಗರಾಜನ್ ಮಾತನಾಡಿದರು.
ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಹಾಗೂ ಗೌತಮ ಫೌಂಡೇಶನ್‌ನಿಂದ ನೀಡಲ್ಪಟ್ಟ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಅಂತಿಮ ವರ್ಷದ ಉತ್ತಮ ಸಾಧಕ ವಿದ್ಯಾರ್ಥಿಗಳಿಗೆ ಕೊಡುವ ಶ್ರೀ ಮಧ್ವ ವಾದಿರಾಜ ಪ್ರಶಸ್ತಿಯನ್ನು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ಪ್ರಥಮ್ ಎಲ್.ಕಾಮತ್ ಮತ್ತು ಹಿತಾಶ್ರೀ ಇವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಉತ್ತಮ ವಿದ್ಯಾರ್ಥಿಗಳಿಗೆ ಹಯವದನ ಪ್ರಶಸ್ತಿಯನ್ನು ನೀಡಲಾಯಿತು. ಡಾಕ್ಟರೇಟ್ ಪದವಿ ಪಡೆದುಕೊಂಡ ಅಧ್ಯಾಪಕರನ್ನು ಗೌರವಿಸಲಾಯಿತು.
ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ, ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್.ಜಿ.ಗೋಪಾಲಕೃಷ್ಣ, ಹರೀಶ್ ಬೆಳ್ಮಣ್, ವಿದ್ಯಾರ್ಥಿ ಕೌನ್ಸಿಲ್‌ನ ಅಧ್ಯಕ್ಷ ಅನುರಾಗ್ ಆರ್.ರಾವ್ ಉಪಸ್ಥಿತರಿದ್ದರು.
ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಕಾರ್ಯದರ್ಶಿ ರತ್ನಕುಮಾರ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಪ್ರಾಧ್ಯಾಪಕರಾದ ಸೌಮ್ಯಾ ಭಟ್ ಮತ್ತು ಮಲ್ಯ ಅನಂತ್ ಮೋಹನ್ ನಿರೂಪಿಸಿದರು. ಪ್ರಾಧ್ಯಾಪಕ ಸಚಿನ್ ಪ್ರಭು ವಂದಿಸಿದರು.