ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

Update: 2025-03-31 20:41 IST
ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ
  • whatsapp icon

ಉಡುಪಿ: ಜಿಲ್ಲೆಯಾದ್ಯಂತ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಿದರು.

ಉಡುಪಿ ನಗರ ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಮುಸ್ಲಿಮರು ಬೆಳಗ್ಗೆ ಅರ್ಹರಿಗೆ ಫಿತರ್ ಝಕಾತ್ ನೀಡಿದ ಬಳಿಕ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಲಿ ಪ್ರಾರ್ಥನೆ ಸಲ್ಲಿಸಿದರು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು

ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.

ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ  ಈದ್ ಮೆರವಣಿಗೆ ಹೊರಟು, ಕುಂದಾಪುರ ಈದ್ಗಾ ಮೈದಾನದಲ್ಲಿ ಧರ್ಮಗುರು ಮೌಲಾನ ಕರಾರ್ ಹುಸೇನ್  ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ನೆರವೇರಿಸಲಾಯಿತು.

ಗಂಗೊಳ್ಳಿಯ ಜುಮ್ಮಾ ಮಸೀದಿಯಲ್ಲಿ ಮೌಲಾನ ಮುಝಮ್ಮಿಲ್ ನದ್ವಿ, ಮೋಹಿದೀನ್ ಜುಮ್ಮಾ ಮಸೀದಿಯಲ್ಲಿ ಖತೀಬ್ ಮೌಲಾನ ಅಬ್ದುಲ್ ಕರೀಂ ನದ್ವಿ,  ಶಾಹಿ ಜುಮ್ಮಾ ಮಸೀದಿಯಲ್ಲಿ ಮೌಲಾನ ರಹಮತುಲ್ಲಾಹ್ ಕೋಲ್ಕಾರ್ ನದ್ವಿ ಅವರ ನೇತೃತ್ವದಲ್ಲಿ ವಿಶೇಷ ನಮಾಝ್ ನಿರ್ವಹಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಗುರುಗಳು ತಮ್ಮ ಈದ್ ಸಂದೇಶದಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಿದರು. ಅಲ್ಲದೇ ಯುದ್ಧಪೀಡಿತ ಫೆಲೆಸ್ತಿನ್ ಜನತೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಅಲ್ಲದೆ ಎಲ್ಲರೂ ಪರಸ್ಪರ ಸಹೋದರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು.

ಹಬ್ಬದ ದಿನ ಯಾವುದೇ ಅಹಿತಕರ ಘಟನೆ ನಡೆದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಇಂದು ಯುವಜನತೆಯನ್ನು ಕಾಡುತ್ತಿರುವ ಬಹಳ ದೊಡ್ಡ ಸಮಸ್ಯೆ ಅಂದರೆ ಮಾದಕ ದ್ರವ್ಯ ವ್ಯಸನ. ಇದರಲ್ಲಿ ಮುಸ್ಲಿಂ ಯುವಕರು ಕೂಡ ಹೊರತಾಗಿಲ್ಲ. ಯುವಜನತೆ ಈ ರೀತಿಯ ಚಟಕ್ಕೆ ಬಲಿಯಾಗುತ್ತಿರುವುದರಿಂದ ದೇಶದ ಅಭಿವೃದ್ಧಿಗೆ ಬಹಳ ದೊಡ್ಡ ತೊಡಕಾಗುತ್ತಿದೆ. ಆದುದರಿಂದ ಯುವಜನತೆ ಈ ಮಾದಕ ದ್ರವ್ಯ ವ್ಯಸನದಿಂದ ದೂರ ಇದ್ದು ಸ್ವಸ್ಥ ಸಮಾಜ ನಿರ್ಮಿಸುವ ಮೂಲಕ ದೇಶ ಕಟ್ಟುವಲ್ಲಿ ಕೈಜೋಡಿಸಬೇಕು. ಎಂದು ಬ್ರಹ್ಮಗಿರಿ ನಾಯರ್ಕೆರೆ ಹಾಶಿಮಿ ಮಸೀದಿಯ ಇಮಾಮರಾದ ಒಬೇದುರ್ರಹ್ಮಾನ್ ನದ್ವಿ ಕರೆ ಕೊಟ್ಟರು.

ಯುವಜನತೆ ಇಂದು ಶಿಕ್ಷಣಕ್ಕೆ ಬಹಳಷ್ಟು ಒತ್ತು ನೀಡಬೇಕು. ಇದರಿಂದ ದೇಶಕ್ಕೆ ಬಹಳ ದೊಡ್ಡ ಕೊಡುಗೆ ನೀಡಲು ಸಾಧ್ಯ. ಆದುದರಿಂದ ಶಿಕ್ಷಣ ಪಡೆಯುವುದೇ ನಮ್ಮ ಜೀವನದ ಮುಖ್ಯ ಗುರಿಯಾಗಬೇಕೆ ಹೊರತು ಇಂತಹ ಮಾದಕ ದ್ರವ್ಯ ಸೇವನೆ ಚಟಗಳಲ್ಲ. ಪೋಷಕರು ಕೂಡ ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಬಹಳಷ್ಟು ನಿಗಾವಹಿಸಬೇಕು. ಹದಿಹರೆಯದಲ್ಲಿ ಬಹಳಷ್ಟು ಯುವಜನತೆ ದಾರಿ ತಪ್ಪುತ್ತಿದ್ದಾರೆ ಆದ್ದರಿಂದ ಇಂತಹ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಇಂದಿನ ಈದ್ ಸಮಾರಂಭದ ಪ್ರಯುಕ್ತ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.








 


 


 


Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News