ಮಾನಸಿಕ ಖಿನ್ನತೆಯಿಂದ ಹೊರಬರಲು ಕ್ರೀಡೆ ಪ್ರಮುಖ ಪಾತ್ರ: ಪ್ರಭಾಕರ ಪೂಜಾರಿ

ಉಡುಪಿ, ಎ.2: ಕ್ರೀಡೆ ನಮಗೆ ದೈಹಿಕ ವ್ಯಾಯಾಮದ ಜೊತೆಗೆ ಮಾನಸಿಕ ಆರೋಗ್ಯವನ್ನು ನೀಡುತ್ತದೆ. ಮಾನಸಿಕ ಖಿನ್ನತೆ, ಒತ್ತಡ ಮತ್ತು ಆಲಸ್ಯದಿಂದ ಹೊರಬರಲು ಕ್ರೀಡೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದ್ದಾರೆ.
ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಉಡುಪಿ ಸಾಫಲ್ಯ ಟ್ರಸ್ಟ್‌ನ ಅಧ್ಯಕ್ಷೆ ಹರಿಣಾ ರಮೇಶ್ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಧರ ಪ್ರಸಾದ್ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ನಿಕೇತನ, ಐಕ್ಯೂಎಸಿ ಸಂಚಾಲಕ ಪ್ರೊ.ಶ್ರೀಮತಿ ಅಡಿಗ, ವಾಣಿಜ್ಯ ನಿಕಾಯದ ಡೀನ್ ಗೌರಿ ಎಸ್‌ಯ ಭಟ್ ಮತ್ತು ಸಾಫಲ್ಯ ಟ್ರಸ್ಟ್‌ನ ನಿರ್ದೇಶಕಿ ನಿರೂಪಮಾ ಪ್ರಸಾದ್ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಜೇಂದ್ರ ಕೆ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ವಂದಿಸಿದರು.