ಇಂದ್ರಾಳಿ ಮೇಲ್ಸೇತುವೆ ಗಡುವು ಎಪ್ರಿಲ್ ಕೊನೆವರೆಗೆ ವಿಸ್ತರಣೆ

ಉಡುಪಿ, ಎ.2: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 20ರಿಂದ 25 ದಿನಗಳ ಕಾಲಾವಕಾಶ ಬೇಕಾಗಿದ್ದು, ಎಪ್ರಿಲ್ ಕೊನೆಯೊಳಗೆ ಪೂರ್ಣಗೊಳಿಸುವ ವಿಶ್ವಾಸ ವನ್ನು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾದಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಇಂದ್ರಾಳಿ ಬಳಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರೊಂದಿಗೆ ಭೇಟಿ ನೀಡಿ ಕಾಮಗಾರಿಯಲ್ಲಾಗಿರುವ ಪ್ರಗತಿ ಯನ್ನು ವೀಕ್ಷಿಸಿದರು.
ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಕಾಮಗಾರಿಯ ವಿವರ ನೀಡಿದ್ದು, 20 ದಿನಗಳಲ್ಲಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಆದರೆ ಬಾಕಿ ಉಳಿದಿರುವ ಕೆಲಸ ನೋಡಿ ದಾಗ ಈ ತಿಂಗಳ ಕೊನೆಯವರೆಗೆ ಕಾಲಾವಕಾಶ ಬೇಕಾಗಬಹುದು ಎಂದು ಜಿಲ್ಲಾದಿಕಾರಿಗಳು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದರು.
ರೈಲ್ವೆ ಮೇಲ್ಸೇತುವೆಯ ಕಬ್ಬಿಣದ ಗರ್ಡರ್‌ನ ವೆಲ್ಡಿಂಗ್ ಕಾಮಗಾರಿ ಮುಗಿದಿದೆ. ವೆಲ್ಡಿಂಗ್‌ನ ಗುಣಮಟ್ಟ ವನ್ನು ಸ್ಥಳೀಯ ಅಧಿಕಾರಿಗಳು ಪರೀಕ್ಷಿಸಿದ್ದಾರೆ. ಇನ್ನೂ ಲಕ್ನೋದಿಂದ ಮೇಲಾಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಒಪ್ಪಿಗೆ ಸೂಚಿಸಬೇಕಿದೆ. ಇದರೊಂದಿಗೆ ಗರ್ಡರ್‌ನ್ನು ಜಾರಿಸಲು ಒಂದು ಕಡೆಯಿಂದ ಕ್ರಿಬ್ಸ್‌ಗಳನ್ನು ಇರಿಸುವ ಕೆಲಸ ನಡೆಯುತ್ತಿದೆ. ಮತ್ತೊಂದು ಕಡೆಗೂ ಇದನ್ನು ಅಳವಡಿಸಬೇಕಾಗಿದೆ.
ಈ ಎಲ್ಲಾ ಕಾಮಗಾರಿಗಳನ್ನು ರೈಲ್ವೆ ಮೇಲಾಧಿಕಾರಿಗಳು ಬಂದು ಪರಿಶೀಲಿಸಿ ಒಪ್ಪಿಗೆ ಸೂಚಿಸಿದ ಬಳಿಕ ವಷ್ಟೇ ರೈಲ್ವೆ ಇಲಾಖೆ, ಒಂದು ಇಡೀ ದಿನ ಮಾರ್ಗದ ಎಲ್ಲಾ ರೈಲುಗಳ ಸಂಚಾರ ನಿಲ್ಲಿಸಲು ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ. ಇದಕ್ಕೆ ಒಂದು ವಾರ ಬೇಕಾಗಬಹುದು ಎಂದರು.
ಪ್ರಗತಿ ಪರಿಶೀಲನೆ: ಕಾಮಗಾರಿ ಸ್ಥಳಕ್ಕೆ ಇಂದು ಭೇಟಿ ನೀಡಿದ ಜಿಲ್ಲಾದಿಕಾರಿ ಡಾ.ವಿದ್ಯಾಕುಮಾರಿ, ಅಂತಿಮ ಘಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಎಲ್ಲಾ ರೀತಿಯ ಅಗತ್ಯ ಸಿದ್ಥತೆಗಳನ್ನು ಮಾಡಿಕೊಳ್ಳು ವುದರೊಂದಿಗೆ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಮೇಲ್ಸೇತುವೆಯ ಗರ್ಡರ್ ನಿರ್ಮಾಣದ ವೆಲ್ಡಿಂಗ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆಯ ವತಿಯಿಂದ ವೆಲ್ಡಿಂಗ್‌ನ ಗುಣಮಟ್ಟವನ್ನು ಸ್ಥಳೀಯವಾಗಿ ಪರಿಶೀಲಿಸಲಾಗಿದೆ. ಇನ್ನು ಲಕ್ನೋದ ರೈಲ್ವೇ ಡಿಸೈನ್ ಮತ್ತು ಸೇಫ್ಟಿ ಆರ್ಗನೈಸೇಷನ್‌ನಿಂದ ಪರಿಶೀಲನೆ ನಡೆಯಬೇಕಾಗಿದೆ ಎಂದರು.
ಗರ್ಡರ್‌ಗಳನ್ನು ರೈಲ್ವೇ ಮೇಲ್ಸೇತುವೆಯಾಗಿ ಅಳವಡಿಸಲು ಅಗತ್ಯವಿರುವ ಬೃಹತ್ ಕ್ರೈನ್‌ಗಳು, ಜಾಕ್ ಗಳು, ರೋಲರ್‌ಗಳು, ರೇಲ್ಸ್‌ಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ಸಾಧನ-ಸಲಕರಣೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದ ಅವರು, ಕಾಮಗಾರಿ ಸಂದರ್ಭದಲ್ಲಿ ಸುರಕ್ಷಿತ ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಬಂಧಿತರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಕೊಂಕಣ ರೈಲ್ವೆಯ ಸೀನೀಯರ್ ಇಂಜಿನಿಯರ್ ಗೋಪಾಲಕೃಷ್ಣ, ಲೋಕೋಪಯೋಗಿ ಇಲಾಖೆಯ ಎ.ಇ ಮಂಜುನಾಥ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

