ಎ.15ರವರೆಗೆ ಮಂಗಳೂರು ಜಂಕ್ಷನ್- ಮುಂಬೈ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಥಾಣೆಯವರೆಗೆ

ಉಡುಪಿ, ಎ.3: ಮುಂಬೈಯ ಸಿಎಸ್‌ಎಂಟಿ ನಿಲ್ದಾಣದ ಪ್ಲಾಟ್‌ಫಾರಂ ನಂ.12 ಮತ್ತು 13ರ ವಿಸ್ತರಣಾ ಕಾಮಗಾರಿ ನಡೆಯುತ್ತಿರುವುದರಿಂದ ಎ.15ರವರೆಗೆ ಮಂಗಳೂರು ಜಂಕ್ಷನ್ ಹಾಗೂ ಮುಂಬೈ ಸಿಎಸ್‌ಎಂಟಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು (ನಂ.12134) ಥಾಣೆಯವರೆಗೆ ಮಾತ್ರ ಓಡಿಸಲು ಸೆಂಟ್ರಲ್ ರೈಲ್ವೆ ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಅದೇ ರೀತಿ ಮಡಗಾಂವ್ ಜಂಕ್ಷನ್ ಹಾಗೂ ಮುಂಬೈ ಸಿಎಸ್‌ಎಂಟಿ ನಡುವೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್ ಹಾಗೂ ಜನಶತಾಬ್ದಿ ಎಕ್ಸ್‌ಪ್ರೆಸ್ ಮೇ15ರವರೆಗೆ ದಾದರ್ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೇಸಿಗೆ ವಿಶೇಷ ರೈಲು: ಪ್ರಯಾಣಿಕರ ಜನದಟ್ಟಣೆಯನ್ನು ಕಡಿಮೆ ಮಾಡಲು ಈರೋಡ್ ಜಂಕ್ಷನ್ ಹಾಗೂ ಗುಜರಾತ್‌ನ ಬರ್ಮೆರ್ ನಡುವೆ ದಕ್ಷಿಣ ರೈಲ್ವೆಯ ಸಹಯೋಗದೊಂದಿಗೆ ಬೇಸಿಗೆಯ ವಿಶೇಷ ಸಾಪ್ತಾಹಿಕ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ. ಎ.8ರಿಂದ ಜೂನ್ 10ರವರೆಗೆ ಈ ರೈಲು ಸಂಚರಿಸಲಿದ್ದು, ಪ್ರತಿ ಮಂಗಳವಾರ ಮುಂಜಾನೆ 6:20ಕ್ಕೆ ಈರೋಡ್ ಜಂಕ್ಷನ್‌ನಿಂದ ಪ್ರಯಾಣ ಪ್ರಾರಂಭಿಸುವ ಈ ರೈಲು ಗುರುವಾರ ಮುಂಜಾನೆ 4:30ಕ್ಕೆ ಬರ್ಮೆರ್ ನಿಲ್ದಾಣ ತಲುಪಲಿದೆ.
ಈ ರೈಲಿಗೆ ಉಡುಪಿ ಜಿಲ್ಲೆಯಲ್ಲಿ ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಕುಮಟಾ, ಗೋಕರ್ಣ ರೋಡ್, ಅಂಕೋಲ, ಕಾರವಾರಗಳಲ್ಲಿ ನಿಲುಗಡೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.