ಮಂಗಳೂರು ವಿವಿಗೆ ರಾಷ್ಟ್ರೀಯ ಖೋ ಖೋ ಚಾಂಪಿಯನ್ ಕಿರೀಟ: ಮುಂಬೈ ವಿವಿ ವಿರುದ್ಧ 11-10ರ ಜಯ

Update: 2025-04-12 22:31 IST
ಮಂಗಳೂರು ವಿವಿಗೆ ರಾಷ್ಟ್ರೀಯ ಖೋ ಖೋ ಚಾಂಪಿಯನ್ ಕಿರೀಟ: ಮುಂಬೈ ವಿವಿ ವಿರುದ್ಧ 11-10ರ ಜಯ
  • whatsapp icon

ಉಡುಪಿ, ಎ.12: ದೀಕ್ಷಿತ್ ಎಂ.ಜೆ. ಅವರ ಅತ್ಯುತ್ತಮ ಆಕ್ರಮಣಕಾರಿ ಆಟ ಹಾಗೂ ನಿಖಿಲ್ ಬಿ. ಅವರ ರಕ್ಷಣಾತ್ಮಕ ಆಟದ ನೆರವಿನಿಂದ ಆತಿಥೇಯ ಮಂಗಳೂರು ವಿಶ್ವವಿದ್ಯಾಲಯ ಪುರುಷರ ತಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಖೋ-ಖೋ ಟೂರ್ನಿಯಲ್ಲಿ ನೂತನ ರಾಷ್ಟ್ರೀಯ ಚಾಂಪಿಯನ್ ಆಗಿ ಮೂಡಿಬಂದಿದೆ.

ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಶ್ರೀವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ಅಖಿಲ ಭಾರತ ಅಂತರ ವಿವಿ ಪುರುಷರ ಖೋ-ಖೋ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಂಗಳೂರು ವಿವಿ ಇಂದಿನ ಫೈನಲ್ ಪಂದ್ಯದಲ್ಲಿ ಮುಂಬೈ ವಿವಿ ತಂಡವನ್ನು 11-10 ಅಂಕಗಳ ಅಂತರದಿಂದ ಪರಾಭವಗೊಳಿಸಿ ಮಿರುಗುವ ವಿನ್ನರ್ ಟ್ರೋಫಿಯನ್ನು ಕೈಗೆತ್ತಿಕೊಂಡಿತು.


ಕಳೆದ ಬಾರಿ ಸೆಮಿಫೈನಲ್ ಪಂದ್ಯಗಳಲ್ಲಿ ಸೋತು ಜಂಟಿಯಾಗಿ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದ ಮಂಗಳೂರು ವಿವಿ ಹಾಗೂ ಮುಂಬಯಿ ವಿವಿ ಈ ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾದವು. ಮಧ್ಯಂತರದ ವೇಳೆ 7-5ರ ಮುನ್ನಡೆಯಲ್ಲಿದ್ದ ಮಂಗಳೂರು ವಿವಿ, ಅಂತಿಮವಾಗಿ 11-10ರ ಅಂತರದ ಜಯ ದಾಖಲಿಸಿ ವಿಜೇತ ತಂಡವೆನಿಸಿಕೊಂಡಿತು.

ನಿನ್ನೆ ಸಂಜೆ ನಡೆದ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಪರಾಭವಗೊಂಡಿದ್ದ ಕಳೆದ ಬಾರಿಯ ರನ್ನರ್ ಅಪ್ ಮಹಾರಾಷ್ಟ್ರ ನಾಂದೇಡ್‌ನ ಸ್ವಾಮಿ ರಾಮನಾಥ ತೀರ್ಥ ಮರಾಠವಾಡ ವಿವಿ (ಎಸ್‌ಆರ್‌ಟಿಎಂಯು) ಹಾಗೂ ಸಾಂಭಾಜಿನಗರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿವಿ (ಡಾ.ಬಿಎಎಂಯು) ಈ ಬಾರಿ ಜಂಟಿಯಾಗಿ ಮೂರನೇ ಸ್ಥಾನಕ್ಕಿರುವ ಟ್ರೋಫಿಯನ್ನು ಪಡೆದವು.


ದೀಕ್ಷಿತ್, ನಿಖಿಲ್‌ಗೆ ಪ್ರಶಸ್ತಿ: ದೇಶದ ನಾಲ್ಕು ವಲಯಗಳಿಂದ ಅಗ್ರಗಣ್ಯ ತಲಾ ನಾಲ್ಕು ತಂಡಗಳು ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಿದ್ದ ಮೂರು ದಿನಗಳ ಟೂರ್ನಿಯುದ್ದಕ್ಕೂ ಅತ್ಯುತ್ತಮ ವೈಯಕ್ತಿಕ ಪ್ರದರ್ಶನ ನೀಡಿದ ಮೂವರು ಖೋ- ಖೋ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಮಂಗಳೂರು ವಿವಿಯ ನಿಖಿಲ್ ಬಿ. ಅತ್ಯುತ್ತಮ ಡಿಫೆಂಡರ್ ಆಗಿ ಆಯ್ಕೆಯಾದರೆ, ಚಾಂಪಿಯನ್ ತಂಡದ ದೀಕ್ಷಿತ್ ಎಂ.ಜೆ. ಅತ್ಯುತ್ತಮ ಚೇಸರ್ ಆಗಿ ಪುರಸ್ಕೃತರಾದರು. ರನ್ನರ್ ಅಪ್ ಮುಂಬಯಿ ವಿವಿಯ ಆಕಾಶ್ ಕದಮ್ ಅವರು ಟೂರ್ನಿಯ ಅತ್ಯುತ್ತಮ ಆಲ್‌ರೌಂಡ್ ಆಟಗಾರರಾಗಿ ಆಯ್ಕೆಯಾಗುವ ಮೂಲಕ ಟ್ರೋಫಿಯನ್ನು ಸ್ವೀಕರಿಸಿದರು.

ಮಂಗಳೂರು ವಿವಿ ಆಕ್ರಮಣಕಾರಿ ಆಟ: ಖೋ-ಖೋ ಆಟದ ಎಲ್ಲಾ ವಿಭಾಗಗಳಲ್ಲೂ ಸಮಬಲದ ತಂಡ ಗಳಾಗಿ ಕಂಡುಬಂದಿದ್ದ ಮಂಗಳೂರು ವಿವಿ ಹಾಗೂ ಮುಂಬೈ ವಿವಿ ನಡುವೆ ಜಿದ್ದಾಜಿದ್ದಿನ ಹೋರಾಟ ಆರಂಭ ದಿಂದಲೇ ಕಂಡುಬಂತು.ಆದರೆ ಕಿಕ್ಕಿರಿದು ತುಂಬಿದ್ದ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳ ಪೂರ್ಣ ಕಂಠದ ಬೆಂಬಲದೊಂದಿಗೆ ಮಂಗಳೂರು ವಿವಿ ಹೆಚ್ಚು ಉತ್ಸಾಹಭರಿತವಾಗಿ, ಯೋಜನಾ ಬದ್ಧವಾಗಿ ಆಡುವ ಮೂಲಕ ಮೇಲುಗೈ ಸಾಧಿಸಿತು.

ಚೇಸ್ ವೇಳೆ ಮಂಗಳೂರು ವಿವಿಯ ದೀಕ್ಷಿತ್ ಅವರು ಮೂವರು, ನಿಖಿತ್ ಬಿ. ಹಾಗೂ ಸುಹಾಸ್ ವಿ. ಅವರು ಎದುರಾಳಿ ತಂಡದ ತಲಾ ಇಬ್ಬರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮುನ್ನಡೆ ನೀಡಿದರು. ಮದ್ಯಂತರ ವಿರಾಮದ ವೇಳೆಗೆ 7-5ರ ಮುನ್ಞಡೆಯಲ್ಲಿದ್ದ ಮಂಗಳೂರು ವಿವಿ, ನಂತರ ಮುಂಬಯಿಗೆ 5 ಅಂಕಗಳನ್ನು ಮಾತ್ರ ಬಿಟ್ಟುಕೊಡುವ ಮೂಲಕ ತನ್ನ ಚೇಸ್ ವೇಳೆ ವಿಜಯಕ್ಕೆ ಕೇವಲ ನಾಲ್ಕು ಅಂಕ ಗಳನ್ನು ಮಾತ್ರ ಗಳಿಸಬೇಕಾಗಿದ್ದು, ಆರನೇ ನಿಮಿಷದಲ್ಲಿ ಇದನ್ನು ಸಾಧಿಸಿ ವಿಜಯದ ಕಹಳೆ ಮೊಳಗಿಸಿತು.

ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರು ವಿಜೇತರಿಗೆ ಟ್ರೋಫಿಗಳನ್ನು ವಿತರಿಸಿದರು.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News