ದೇವರ ದಾಸಿಮಯ್ಯ ವಚನ ಕನ್ನಡ ಸಾಹಿತ್ಯಕ್ಕೆ ಅದ್ಭುತ ಕೊಡುಗೆ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಉಡುಪಿ, ಎ.3: ದೇವರ ದಾಸಿಮಯ್ಯ ರಚಿಸಿರುವ 176ಕ್ಕೂ ಅಧಿಕ ವಚನಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯಾಗಿದೆ. ಅವರ ವಚನಗಳಲ್ಲಿ ಭಕ್ತಿಯ ಸ್ವಾರಸ್ಯ ಅಡಗಿದ್ದು, ತಮ್ಮ ವೃತ್ತಿ ಯನ್ನು ನಿರ್ವಹಿಸುತ್ತಲೇ ಸಮಾಜದ ಬದಲಾವಣೆಗೆ ವಿಶೇಷವಾದ ಸೇವೆಯನ್ನೂ ಸಲ್ಲಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ದೇವರದಾಸಿಮಯ್ಯ ವಚನ ಸಾಹಿತ್ಯದಲ್ಲಿ ತಮ್ಮ ವಚನಗಳ ಮೂಲಕವೇ ಹೊಸ ಛಾಪು ಮೂಡಿಸಿದ್ದಾರೆ. ಅವರ ನೇಕಾರ ಸಮುದಾಯ ತಮ್ಮ ಕುಲ ಕಸುಬಿನ ಮೂಲಕ ದೇಶ ಹಾಗೂ ನಾಡಿನ ಏಳಿಗೆಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಯಂತಿಗಳು ಕೇವಲ ಆಚರಣೆಗೆ ಸೀಮಿತ ವಾಗದೇ ಆಯಾ ಮಹನೀಯರು ಸಮಾಜಕ್ಕೆ ಸಲ್ಲಿಸಿದ ಸೇವೆಗಳನ್ನು ನೆನೆಯುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಅರ್ಥಪೂರ್ಣ ಮಹತ್ವ ದೊರೆಯಬೇಕು ಎಂದರು.
ಜಿಲ್ಲಾಪಂಚಾಯತ್‌ನ ಉಪಕಾರ್ಯದರ್ಶಿ ಶ್ರೀನಿವಾಸ್ ರಾವ್ ಮಾತನಾಡಿ, ದೇವರ ದಾಸಿಮಯ್ಯ ಮಾಡುವ ಕಾಯಕದಲ್ಲಿ ದೇವರನ್ನು ಕಂಡವರು. ಅವರಂತೆಯೇ ಪ್ರತಿಯೊಬ್ಬರು ತಮ್ಮ ಕೆಲಸದಲ್ಲಿ ನಿಷ್ಠೆ ಹಾಗೂ ಶ್ರದ್ದೆಯನ್ನು ತೋರುವ ಮೂಲಕ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಬೇಕು ಎಂದರು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಸಹಾಯಕ ಆಯುಕ್ತ ಗಿರೀಶ್ ಶೆಟ್ಟಿಗಾರ್ ದಾಸಿಮಯ್ಯರ ಕುರಿತು ವಿಶೇಷ ಉಪನ್ಯಾಸ ನೀಡಿ, ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳ ರೂಪದಲ್ಲಿ ವಚನ ಸಾಹಿತ್ಯ ಗಳ ಆಧ್ಯಾತ್ಮಿಕ ಸಾರವನ್ನು ಪ್ರಚಾರ ಪಡಿಸಿದ ದೇವರ ದಾಸಿಮಯ್ಯ, ಅನ್ಯಾಯ, ಅನಾಚಾರ, ವಾಮಮಾರ್ಗಗಳಿಂದ ಗಳಿಸಿರುವುದು ಎಂದಿಗೂ ನಮಗೆ ದಕ್ಕುವುದಿಲ್ಲ ಎಂದು ತಮ್ಮ ವಚನಗಳ ಮೂಲಕ ಸ್ಪಷ್ಠವಾಗಿ ವಿವರಿಸಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಜಿಲ್ಲಾಧ್ಯಕ್ಷ ರವಿ ಶೆಟ್ಟಿಗಾರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಲಕ್ಷ್ಮಣ ಕೊಡಿಯಾಲ್‌ಬೈಲ್, ನೇಕಾರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಉಪನ್ಯಾಸಕ ಪ್ರದೀಪ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಜಯರಾಮ್ ಶೆಟ್ಟಿಗಾರ್ ವಂದಿಸಿದರು.