ಬೆಂಗಳೂರಿನಲ್ಲಿ ಅಭಯಹಸ್ತದ 250ನೇ ರಕ್ತದಾನ ಶಿಬಿರ

ಉಡುಪಿ, ಎ.2: ಕೊರೋನಾ ಸಂದರ್ಭದಲ್ಲಿ ರಕ್ತಕ್ಕೆ ಅಭಾವ ಕಾಣಿಸಿಕೊಂಡ ಸಂದರ್ಭದಲ್ಲಿ ಹುಟ್ಟಿಕೊಂಡ ಸಂಸ್ಥೆ ಉಡುಪಿಯ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ತನ್ನ ‘ಅಭಯಹಸ್ತ’ ಸಂಸ್ಥೆಯ ಮೂಲಕ ವಿವಿಧ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿ ಅಗತ್ಯವುಳ್ಳವರಿಗೆ ರಕ್ತ ನೀಡುವ ತನ್ನ ಕಾಯಕವನ್ನು ಮುಂದುವರಿಸಿದ್ದು, ಇದೀಗ ತನ್ನ 250ನೇ ರಕ್ತದಾನ ಶಿಬಿರವನ್ನು ಎ.6ರಂದು ಬೆಂಗಳೂರಿನಲ್ಲಿ ಆಯೋಜಿಸಿದೆ ಎಂದು ಸಂಸ್ಥೆಯ ಸತೀಶ್ ಸಾಲಿಯಾನ್ ಮಣಿಪಾಲ ತಿಳಿಸಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೋನಾ ಸಂದರ್ಭದಲ್ಲಿ ಉಡುಪಿ ಹಾಗೂ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಕಾಣಿಸಿಕೊಂಡ ರಕ್ತದ ಕೊರತೆಯನ್ನು ನೀಗಿಸಲು ವಾಟ್ಸಪ್ ಗ್ರೂಪ್ ಮೂಲಕ ಹುಟ್ಟಿಕೊಂಡ ಸಂಸ್ಥೆ, 2020ರ ಮೇ9ರಂದು ತನ್ನ ಮೊದಲ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ ಎಂದವರು ವಿವರಿಸಿದರು.
2020ರಿಂದ ಪ್ರಾರಂಭಿಸಿ ಕಳೆದ ಐದು ವರ್ಷಗಳಲ್ಲಿ ಅಭಯಹಸ್ತ ಸಂಸ್ಥೆ ವಿವಿಧ ಸಂಘಟನೆಗಳ ಸಹಕಾರ ದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಹಾಗೂ ವಿದೇಶಗಳಲ್ಲಿ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಲ್ಲದೇ, ರಕ್ತದಾನ ಕುರಿತು ಜಾಗೃತಿಯನ್ನು ಮೂಡಿ ಸುತ್ತಾ ಬಂದಿದೆ ಎಂದರು.
ದಿನ ನಿತ್ಯ ವಿವಿಧ ಆಸ್ಪತ್ರೆಗಳಿಗೆ ತುರ್ತು ರಕ್ತದಾನಿಗಳ ಪೂರೈಕೆ ಹಾಗೂ ರಕ್ತದಾನ ಶಿಬಿರಗಳ ಆಯೋ ಜನೆ ಮೂಲಕ ಇದುವರೆಗೆ ಒಟ್ಟು 32,000ಕ್ಕೂ ಅಧಿಕ ಯುನಿಟ್ ರಕ್ತಗಳನ್ನು ಸಂಗ್ರಹಿಸಿ ನೀಡಿದ್ದು, ಸಾವಿರಾರು ಜೀವಿಗಳಿಗೆ ಪುನರ್ಜನ್ಮ ನೀಡಿದೆ. ಒಂದೇ ವರ್ಷದಲ್ಲಿ 8,000 ಯುನಿಟ್ ರಕ್ತವನ್ನು ಸಂಗ್ರಹಿಸಿದ ಹೆಗ್ಗಳಿಕೆಯೂ ನಮ್ಮ ಸಂಸ್ಥೆಗಿದೆ ಎಂದರು.
ಅಭಯ ಹಸ್ತದ ಕಾರ್ಯವನ್ನು ಮೆಚ್ಚಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಬೆಂಗಳೂರಿನಲ್ಲಿ ಗೌರವಿಸಿ ಸನ್ಮಾನಿಸಿದೆ. ಅಲ್ಲದೇ 2023ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ನಮ್ಮ ಸಂಸ್ಥೆಗೆ ಲಭಿಸಿದೆ ಎಂದು ಸತೀಶ್ ಸಾಲಿಯಾನ್ ತಿಳಿಸಿದರು.
ಇದೀಗ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್‌ನ 250ನೇ ರಕ್ತದಾನ ಶಿಬಿರ ‘ಹೆಗ್ಗುರುತು- 250’ ರಾಜಧಾನಿ ಬೆಂಗಳೂರಿನಲ್ಲಿ ಎ.6ರ ರವಿವಾರ ಬೆಳಗ್ಗೆ 8:30ರಿಂದ ಅಪರಾಹ್ನ 3:00ಗಂಟೆಯವರೆಗೆ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಶ್ರೀರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗಂಡೂರಾವ್ ಶಿಬಿರವನ್ನು ಉದ್ಘಾಟಿಸುವರು. ಅಭಯಹಸ್ತದ ಬೆಂಗಳೂರು ವಲಯ ಸಂಚಾಲಕ ರಾಘವೇಂದ್ರ ಕಾಂಚನ್ ಮರವಂತೆ ಅಧ್ಯಕ್ಷತೆ ವಹಿಸಲಿದ್ದಾರೆ.
ಶಾಸಕ ಎಸ್.ಸುರೇಶ್ ಕುಮಾರ್, ಬೆಂಗಳೂರು ಮೊಗವೀರ ಸಂಘದ ಅಧ್ಯಕ್ಷ ಗುಣಕರ್ ಕೆ., ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ, ಉದ್ಯಮಿಗಳಾ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ರಾಘವೇಂದ್ರ ಸುವರ್ಣ ಮಲ್ಪೆ, ಡಾ.ಬಳ್ಕೂರು ಗೋಪಾಲ ಆಚಾರ್ಯ, ಡಾ.ಬಾಲಕೃಷ್ಣ ಮದ್ದೋಡಿ ಮುಂತಾದವರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಬಾಲಕೃಷ್ಣ ಮದ್ದೋಡಿ, ಶರತ್ ಕಾಂಚನ್, ರತ್ನಾಕರ ಸಾವಂತ್, ಯತೀಶ್ ಸಾಲ್ಯಾನ್ ಮುಂತಾದವರಿದ್ದರು.