ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ ಅಪಘಾತಕ್ಕೆ ಮತ್ತೊಬ್ಬ ಶಾಲಾ ವಿದ್ಯಾರ್ಥಿ ಬಲಿ

Update: 2025-04-02 20:05 IST
ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ ಅಪಘಾತಕ್ಕೆ ಮತ್ತೊಬ್ಬ ಶಾಲಾ ವಿದ್ಯಾರ್ಥಿ ಬಲಿ
  • whatsapp icon

ಉಡುಪಿ, ಎ.2: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ 11 ವರ್ಷ ಪ್ರಾಯದ ಪುಟ್ಟ ಶಾಲಾ ವಿದ್ಯಾರ್ಥಿ ಬಲಿಯಾದ ಘಟನೆಯಿಂದ ಸಿಡಿದೆದ್ದ ಬ್ರಹ್ಮಾವರದ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇಂದು ಪ್ರತಿಭಟನಾ ಮೆರವಣಿಗೆ ಹಾಗೂ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನಾ ಸಭೆ ನಡೆಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ನಮಗೆ ಮಹೇಶ್ ಆಸ್ಪತ್ರೆಯಿಂದ ಎಸ್‌ಎಂಎಸ್ ಜೂನಿಯರ್ ಕಾಲೇಜುವರೆಗೆ (ದೂಪದಕಟ್ಟೆಯವರೆಗೆ) ಸಮರ್ಪಕವಾದ ಸರ್ವಿಸ್ ರಸ್ತೆಯನ್ನು ಕೂಡಲೇ ನಿರ್ಮಿಸಿಕೊಡಬೇಕು. ಬ್ರಹ್ಮಾವರ ಬಸ್ ನಿಲ್ದಾಣ, ಆಕಾಶವಾಣಿ ಸರ್ಕಲ್ ಹಾಗೂ ಮಹೇಶ್ ಆಸ್ಪತ್ರೆ ಎದುರಿನ ಭಾಗದಲ್ಲಿ ವಾಹನಗಳ ಸಂಚಾರ, ಜನರ ಸಂಚಾರ ದು:ಸ್ವಪ್ನವಾಗಿದ್ದು, ಇಲ್ಲಿ ಸುಗಮ ಸಂಚಾರಕ್ಕಾಗಿ ಫ್ಲೈ ಓವರ್ ನಿರ್ಮಾಣ ಮಾಡಲೇಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದು ಪ್ರತಿಭಟನಕಾರರು ಹೇಳಿದರು.

ಎಪ್ರಿಲ್ 12ರೊಳಗೆ ಸರ್ವಿಸ್ ರಸ್ತೆ ನಿರ್ಮಾಣದ ಕುರಿತಂತೆ ಸ್ಪಷ್ಟ ಭರವಸೆ ಸಿಕ್ಕಿ, ಕಾಮಗಾರಿ ಪ್ರಾರಂಭ ಗೊಳ್ಳದಿದ್ದರೆ, ಎ.12ರಂದು ಬ್ರಹ್ಮಾವರ ಬಂದ್‌ಗೆ ಕರೆ ನೀಡಿ, ಉಗ್ರ ಪ್ರತಿಭಟನಾ ಹೋರಾಟ ನಡೆಸಲಾ ಗುವುದು ಎಂದು ಅವರು ರಾ.ಹೆದ್ದಾರಿ ಅಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ಬೆಳಗ್ಗೆ ಶಾಲೆಗೆ ಹೋಗ ಲೆಂದು ರಸ್ತೆ ದಾಟಲು ನಿಂತಿದ್ದ ಸ್ಥಳೀಯ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಂಶ್ ಶೆಟ್ಟಿ (11)ಗೆ ಕಾರು ಢಿಕ್ಕಿ ಹೊಡೆದು ಮೃತಪಟ್ಟಿದ್ದ. ಜಿಲ್ಲೆಯ ಅಪಘಾತದ ‘ಬ್ಲ್ಯಾಕ್‌ ಸ್ಪಾಟ್’ಗಳಲ್ಲಿ ಅಪಘಾತ ನಡೆದ ಸ್ಥಳವೂ ಒಂದೆಂದು ಗುರುತಿಸಿಕೊಂಡಿದ್ದು, ಇಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳಾಗಿ ಹಲವರು ಬಲಿಯಾಗಿದ್ದರು. ಈ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹಲವು ಬಾರಿ ಹೋರಾಟ, ಪ್ರತಿಭಟನೆ ನಡೆಸಿದ್ದರೂ ಯಾವುದೇ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿರಲಿಲ್ಲ.

ಆದ್ದರಿಂದ ನಿನ್ನೆ ಮತ್ತೊಬ್ಬ ಪುಟ್ಟ ಕಂದಮ್ಮ ಮೃತಟ್ಟಾಗ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದ್ದು, ಇಂದು ಬ್ರಹ್ಮಾವರ ಹಾಗೂ ಆಸುಪಾಸಿನ ಸಾವಿರಾರು ಮಂದಿ ಸಾರ್ವಜನಿಕರು, ಹೆತ್ತವರು, 20ಕ್ಕೂ ಅಧಿಕ ಸಂಘಟನೆಗಳ ಪದಾಧಿಕಾರಿಗಳು, ಆಸುಪಾಸಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿ ಘಟನೆಯ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಎಸ್‌ಎಂಎಸ್ ವಿದ್ಯಾಸಂಸ್ಥೆಯ ಬಳಿಯಿಂದ ತಾಲೂಕು ಕಚೇರಿಯ ಆಡಳಿತ ಸೌಧದವರೆಗೆ ಇವರೆಲ್ಲರೂ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ರ್ಯಾಲಿ ನಡೆಸಿದ್ದು, ಪ್ರತಿಭಟನಾ ಸಭೆ ನಡೆಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿ ದವರು ಕಳೆದ ಹಲವು ವರ್ಷಗಳಿಂದ ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯುತಿದ್ದರೂ, ಯಾರೂ ಪೂರಕವಾಗಿ ಸ್ಪಂಧಿಸದ ಬಗ್ಗೆ, ಇದರಿಂದ ನಿರಂತರ ಜೀವಹಾನಿಯಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ವಂಶ್ ಶೆಟ್ಟಿ ಕಲಿಯುತಿದ್ದ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಅಭಿಲಾಷಾ ಹಂದೆ, ಗದ್ಗದಿತ ಕಂಠದಿಂದ ಮಾತನಾಡಿ, ನಮಗೆ ಸುವ್ಯವಸ್ಥಿತ ಸರ್ವಿಸ್ ರಸ್ತೆಯನ್ನು ನಿರ್ಮಿಸಿಕೊಡಿ. ಅದರಲ್ಲೇ ನಮ್ಮ ಮಕ್ಕಳು, ವಾಹನಗಳು ಸಂಚರಿಸುವಂತೆ ನೋಡಿಕೊಳ್ಳುತ್ತೇವೆ ಎಂದರು.

ವಾರಂಬಳ್ಳಿ ಗ್ರಾಪಂನ ಮಾಜಿ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ, ಅಧಿಕಾರಿಗಳು ಇಂಥ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸದೇ ಎಲ್ಲಾ ರಾಜಕೀಯ ಪಕ್ಷದವರನ್ನು ಓಲೈಸಿ ಆರಾಮ ವಾಗಿದ್ದಾರೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಸೌಜನ್ಯವನ್ನೂ ಇವರು ತೋರುತ್ತಿಲ್ಲ. ಒಂದು ವಾರದೊಳಗೆ ಇದಕ್ಕೊಂದು ಶಾಶ್ವತ ಪರಿಹಾರ ತೋರಿಸದಿದ್ದರೆ ದೊಡ್ಡಮಟ್ಟದ ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್‌ಎಂಎಸ್ ಚರ್ಚ್‌ನ ಧರ್ಮಗುರುಗಳಾದ ವಂ.ಮಥಾಯ್ ಮಾತನಾಡಿ, ಇಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ ನಡೆದಿದ್ದು, ಇದರಿಂದಾಗಿ ಇಲ್ಲಿ ಐದಾರು ವಿದ್ಯಾಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಮಸ್ಯೆಗಳಾಗುತ್ತಿವೆ. ತಕ್ಷಣ ಇದಕ್ಕೊಂದು ಪರಿಹಾರ ತೋರಿಸಬೇಕು ಎಂದವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ವಿದ್ಯಾರ್ಥಿ ನಾಯಕಿ ಐಶ್ವರ್ಯ ಲಕ್ಷ್ಮೀ ಅವರು ಮಾತನಾಡಿ, ಎರಡು ವರ್ಷಗಳ ಹಿಂದೆ ನಾವು ಇದೇ ರೀತಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನಾ ಸಭೆ ನಡೆಸಿ ಮನವಿ ಅರ್ಪಿಸಿದ್ದೆವು. ಈಗ ಅದೇ ರಸ್ತೆ ಮತ್ತೊಂದು ಬಲಿ ಪಡೆದಾಗ ಮತ್ತೆ ಪ್ರತಿಭಟಿಸುತಿದ್ದೇವೆ. ಈ ಎರಡು ವರ್ಷಗಳಲ್ಲಿ ಸಮಸ್ಯೆ ಬಗೆಹರಿಸಲು ಯಾರೂ ಮುಂದಾಗಿಲ್ಲ ಎಂಬುದಕ್ಕೆ ಇದು ನಿದರ್ಶನ. ಸಮಸ್ಯೆ ಬಗೆಹರಿಯುವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

ಎಸ್‌ಎಂಎಸ್ ಕಾಲೇಜಿನ ಪ್ರಾಂಶುಪಾಲ ರಾಬರ್ಟ್ ಕ್ಲೈವ್, ಪತ್ರಕರ್ತ ವಸಂತ ಗಿಳಿಯಾರ್, ಆಲ್ವಿನ್ ಆಂದ್ರಾದೆ, ವಂ.ಡೇವಿಡ್ ಕ್ರಾಸ್ತಾ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಭದ್ರತಾ ವ್ಯವಸ್ಥೆ ನಿರ್ವಹಿಸಿದರು.

ಜಿಲ್ಲಾಧಿಕಾರಿಯವರೊಂದಿಗೆ ಚರ್ಚೆ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ತಾಲೂಕು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರು ಇಂದಿನ ಪ್ರತಿಭಟನೆ ಆಯೋಜಿಸಿದ್ದ ವಿವಿಧ ಸಂಘಟನೆಗಳು, ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರು ನೀಡಿದ ಮನವಿಗಳನ್ನು ಸ್ವೀಕರಿಸಿದರು.

ಮನವಿಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ರಸ್ತೆ ಅಪಘಾತಕ್ಕೆ ಬಾಲಕ ವಿದ್ಯಾರ್ಥಿಯೊಬ್ಬ ಬಲಿಯಾಗಿರುವುದು ಅತ್ಯಂತ ದುರದೃಷ್ಟಕರ ಘಟನೆ. ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರು ನಿನ್ನೆಯೇ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ನಿಮ್ಮ ಮನವಿಗಳನ್ನು ನಾನು ಜಿಲ್ಲಾಧಿಕಾರಿಗಳಿಗೆ ತಲುಪಿ ಸುತ್ತೇನೆ. ಅವರು ತುರ್ತಾಗಿ ಈ ಬಗ್ಗೆ ಗಮನ ಹರಿಸುವ ವಿಶ್ವಾಸವಿದೆ ಎಂದರು.

ಒಂದು ವಾರದೊಳಗೆ ಮಹೇಶ್ ಆಸ್ಪತ್ರೆಯಿಂದ ಎಸ್‌ಎಂಎಸ್ ವಿದ್ಯಾ ಸಂಸ್ಥೆಯವರೆಗೆ ಸಮರ್ಪಕ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭ ಗೊಳ್ಳದಿದ್ದರೆ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನು ಪ್ರತಿಭಟನಕಾರರು ನೀಡಿದರು.













Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News