ಡೀಸೆಲ್ ದರ, ಟೋಲ್ ದರ ಏರಿಕೆ ಕೈಬಿಡಲು ಸಿಐಟಿಯು ಆಗ್ರಹ

ಉಡುಪಿ, ಎ.2: ರಾಜ್ಯದ ಜನರು ಯುಗಾದಿ ಹಬ್ಬದ ಮುನ್ನವೇ ಹಾಲಿನ ಬೆಲೆ, ವಿದ್ಯುತ್ ದರ ಏರಿಕೆಯ ಕಹಿಗಳನ್ನು ಅನುಭವಿಸುತ್ತಿರುವಾಗಲೇ ರಾಜ್ಯದ ಕಾಂಗ್ರೆಸ್ ಸರಕಾರ ಡೀಸೆಲ್ ದರ ಪ್ರತಿ ಲೀಟರ್‌ಗೆ 2ರೂ. ಏರಿಕೆಯಾಗಿ ಮಾಡಿರುವುದು ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಶೇ.4ರಿಂದ 5ರಷ್ಟು ಟೊಲ್ ದರಗಳನ್ನು ಏರಿಕೆ ಮಾಡಿರುವುದು ಅತ್ಯಂತ ಜನ ವಿರೋಧಿ ಕ್ರಮಗಳಾಗಿವೆ. ಈ ಎರಡು ದರ ಏರಿಕೆಗಳನ್ನು ಕೂಡಲೇ ಕೈ ಬಿಡಬೇಕೆಂದು ಸೆಂಟ್ರಲ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ವಲಯ ಸಮಿತಿ ಆಗ್ರಹಿಸಿದೆ
ಗ್ಯಾರಂಟಿ ಯೋಜನೆಗೆ ಹಣ ನೀಡುವ ನೆಪದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವು ಜನ ಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಗದಾ ಪ್ರವಾಹವನ್ನೇ ಹರಿಯಬಿಟ್ಟಿದೆ. ಶಾಸಕರ ಸಂಬಳ ಭತ್ಯೆಗಳನ್ನು ಯಾವ ನಾಚಿಕೆ ಇಲ್ಲದೆ ಹೆಚ್ಚಿಸಿಕೊಂಡ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಶಾಸಕರು ಜನ ಸಾಮಾನ್ಯರ ಬದುಕಿಗೆ ಮಾತ್ರ ಯಾವುದೇ ರಿಯಾಯಿತಿ ನೀಡದಿರುವುದು ಖಂಡನಾರ್ಹವಾಗಿದೆ
ರಜೆ ದಿನಗಳಲ್ಲಿ ಟೋಲ್ ದರ ಹೆಚ್ಚಳದಿಂದ ಜನರ ಬದುಕು ಮತ್ತಷ್ಷು ದುಸ್ತರ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್ ವೇಗಗಳಲ್ಲಿ ಟೋಲ್ ದರವನ್ನು ಶೇ.4ರಿಂದ 5ರಷ್ಟು ಹೆಚ್ಚಳ ಮಾಡಿದ್ದು ಮಂಗಳವಾರ ದಿಂದಲೇ ಜಾರಿಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೀತಿಯು ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುಸ್ಥರಗೊಳಿಸಿದೆ ಎಂದು ಸಿಐಟಿಯು ತಿಳಿಸಿದೆ.
ದೇಶದ ಕೋಟ್ಯಂತರ ಜನರ ರಜಾಕಾಲದ ಈ ದಿನಗಳಲ್ಲಿ ಪ್ರವಾಸ ಮದುವೆ ಹಬ್ಬ ಇತ್ಯಾದಿಗಳಲ್ಲಿ ಕುಟುಂಬದ ಸದಸ್ಯರು ಬಂಧು ಬಳಗಗಳ ಜತೆ ದೂರ ದೂರ ಪ್ರದೇಶಗಳಿಗೆ ವಾಹನಗಳಲ್ಲಿ ಸಂಚರಿಸುವ ಅನಿವಾರ್ಯತೆಯಲ್ಲಿ ಇದ್ದಾರೆ. ಇಂತಹ ಅವಕಾಶವನ್ನೇ ಬಳಸಿ ಕೇಂದ್ರ ಸರಕಾರ ಜನರ ಬದುಕಿನ ಮೇಲೆ ಮತ್ತಷ್ಟು ಹೊರೆ ಹೊರಿಸಲು ಹೊರಟಿರುವುದು ಅನ್ಯಾಯದ ಪರಮಾಧಿಯಾಗಿದೆ. ಈಗಾಗಲೇ ನಿರಂತರವಾಗಿ ಏರುತ್ತಿರುವ ಬೆಲೆಗಳಿಂದಾಗಿ ಮತ್ತು ಮೋದಿ ಸರಕಾರದ ಶ್ರೀಮಂತ ಪರ ನೀತಿ ಗಳಿಂದಾಗಿ ಈಗಾಗಲೇ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ನೀತಿಗಳ ವಿರುದ್ಧ ಸಿಐಟಿಯು ತನ್ನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್ ತಿಳಿಸಿದ್ದಾರೆ.