ಕುಂದಾಪುರ ವಕೀಲರ ಸಂಘಕ್ಕೆ ಹಲವು ವರ್ಷಗಳ ಇತಿಹಾಸ: ನ್ಯಾ.ವೆಂಕಟೇಶ್ ನಾಯ್ಕ್

ಕುಂದಾಪುರ, ಎ.2: ಕುಂದಾಪುರ ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ನಡೆದ ಕುಂದಾಪುರ ವಕೀಲರ ಸಂಘದ ವಾರ್ಷಿಕೋತ್ಸವವನ್ನು ಹೈಕೋರ್ಟ್ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಟಿ. ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕುಂದಾಪುರ ವಕೀಲರ ಸಂಘಕ್ಕೆ ಬಹಳಷ್ಟು ವರ್ಷಗಳ ಇತಿಹಾಸವಿದೆ. ಇಲ್ಲಿನ ನ್ಯಾಯಾಲಯ ಈ ಹಿಂದೆ ಅವ್ಯವಸ್ಥೆಯಿಂದ ಕೂಡಿದ್ದು ಅಂದಿನ ಬಾರ್ ಅಸೋಸಿಯೇಶನ್ ಮನವಿಯಂತೆ ಹೆಚ್ಚುವರಿ ಕಟ್ಟಡ ಹಾಗೂ ವಕೀಲರ ಭವನಕ್ಕೆ ಪ್ರಸ್ತಾವನೆಯನ್ನು ಆ ಕಾಲದ ನ್ಯಾಯಾಧೀಶರಿಗೆ ಕಳಿಸಿದ್ದು ಅವರ ಮುತುವರ್ಜಿಯಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದೆ ಎಂದರು.
ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಹಂದಟ್ಟು ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಗಂಗಣ್ಣನವರ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷ ಸಂದೇಶ್ ಕುಮಾರ್ ಶೆಟ್ಟಿ, ಜತೆ ಕಾರ್ಯದರ್ಶಿ ಜೆ.ಗೋವಿಂದ ನಾಯ್ಕ್, ಕೋಶಾಧಿಕಾರಿ ಐ.ನಾಗರಾಜ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಕೀಲರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನ್ಯಾಯಾಲಯದ ಸಿಬ್ಬಂದಿ ರವಿ ಅವರನ್ನು ಗೌರವಿಸ ಲಾಯಿತು. ಬಳಿಕ ವಕೀಲರು ಹಾಗೂ ಕುಟುಂಬದವರಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಹಾಗೂ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.
ಹಿರಿಯ ವಕೀಲ ಟಿ.ಬಿ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜೆ.ಶ್ರೀನಾಥ್ ರಾವ್ ಸ್ವಾಗತಿಸಿದರು. ವಕೀಲರಾದ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕುಮಾರ್ ಶೆಟ್ಟಿ ಪರಿಚಯಿಸಿದರು.